ಉಜಿರೆಯ ಎಸ್.ಡಿ.ಎಂ. ಪ.ಪೂ ಕಾಲೇಜಿನಲ್ಲಿ ಅಣ್ಣಾಮಲೈ ಸಂವಾದ
ನಮ್ಮ ಗುರಿಯನ್ನು ನಾವೇ ಸೃಷ್ಟಿಮಾಡಿಕೊಳ್ಳಬೇಕು
ಅಣ್ಣಾಮಲೈ ವಿದ್ಯಾರ್ಥಿಗಳಿಗೆ ಕರೆ
ಉಜಿರೆಯ ಎಸ್.ಡಿ.ಎಂ. ಪ.ಪೂ ಕಾಲೇಜಿನಲ್ಲಿ ಅಣ್ಣಾಮಲೈ ಸಂವಾದ. ಪ್ರತಿಯೊಬ್ಬರೂ ಸಹ ಬದುಕಿನಲ್ಲಿ ಉದ್ದೇಶ ಹೊಂದಿರಬೇಕು. ಉದ್ದೇಶ ಈಡೇರಿಕೆಗೆ ತೊಡಗಿದಾಗ ಹೊಸ ದೃಷ್ಟಿಕೋನ ಸಿಗುತ್ತದೆ. ಆ ಮೂಲಕ ನಮ್ಮ ಭವಿತವ್ಯ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೂ ಮೊದಲು ನಮ್ಮ ಗುರಿಯನ್ನು ನಾವೇ ಸೃಷ್ಟಿಮಾಡಿಕೊಳ್ಳಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿದ್ಯಾರ್ಥಿಗಳಿಗೆ ಕರೆನೀಡಿದರು. ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಮ್ಮೊಂದಿಗೆ ಅಣ್ಣಾಮಲೈ ಎನ್ನುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೃಷಿಯಿಂದ ನಮ್ಮ ಬದುಕು ಕಟ್ಟಿಕೊಳ್ಳುವುದು ಮುಂದೆ ಅನಿವಾರ್ಯವಾಗಲಿದೆ. ಪ್ರಸ್ತುತ ಕೃಷಿ ಮಾಡಿ ಆಹಾರ ಪೂರೈಸುವವರು ಕಡಿಮೆಯಾಗಿ ಉಣ್ಣುವವರು ಹೆಚ್ಚಾಗುತ್ತಿರುವುದು ಕಳವಳದ ವಿಷಯವಾಗಿದೆ. ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ಕಾಲ ಬಂದೇ ಬರುತ್ತದೆ. ಇದರೊಂದಿಗೆ ನಮ್ಮ ಗುರಿ ಹಾಗೂ ಕಾಣುವ ಕನಸ್ಸು ದೊಡ್ಡದಾಗಿರಲಿ. ಆ ಮೂಲಕ ನಮ್ಮ ಜೀವನವನ್ನು ನಾವು ರೂಪಿಸಿಕೊಳ್ಳಲು ಸಾಧ್ಯ. ವ್ಯವಸ್ಥೆ ಕೆಟ್ಟುಹೋಗಿಲ್ಲ . ಆದರೆ ಅದು ಬದಲಾವಣೆ ಬಯಸುತ್ತಿದೆ. ಹಿಂಸೆ, ಅನಾಚಾರಗಳಿಗೆ ಕಡಿವಾಣ ಹಾಕಿಕೊಂಡಿರುವ ಸುಸ್ಥಿರ ಸಮಾಜವನ್ನು ನಿರ್ಮಾಣ ಕಟ್ಟಬೇಕಾಗಿದೆ. ಎಲ್ಲದಕ್ಕೂ ಮೊದಲು ರಾಜಕೀಯ ವ್ಯವಸ್ಥೆ ಬದಲಾಗಬೇಕು ಎಂದು ಸಂದರ್ಭದಲ್ಲಿ ಹೇಳಿದರು. ಇದರೊಂದಿಗೆ ಮಾದಕದ್ರವ್ಯ, ಲಂಚ, ಕೆಟ್ಟ ವ್ಯವಸ್ಥೆ ಇತ್ಯಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಮೊಹಮ್ಮದ್ ನವಾಝ್ ರಚಿಸಿದ ‘ ಬದುಕು ಸಾಧಿಸುವೆಡೆಗಿನ ದಿಟ್ಟ ಹೆಜ್ಜೆ ‘ ಎಂಬ ಪದ್ಯ ಕೃತಿಯನ್ನು ಅಣ್ಣಾಮಲೈ ಬಿಡುಗಡೆಗೊಳಿಸಿದರು. ಹಾಗೆಯೇ ಇವರ ಚಿತ್ರ ಬಿಡಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಸಂಸ್ಥೆಯ ಪರವಾಗಿ ಪ್ರಾಚಾರ್ಯ ಪ್ರೊ. ದಿನೇಶ್ ಚೌಟ ಸ್ವಾಗತಿಸಿ ಸನ್ಮಾನಿಸಿದರು. ವಿದ್ಯಾರ್ಥಿಗಳ ಪರವಾಗಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ರಕ್ಷಿತಾ ಹಾಗೂ ಮನೋಜ್ ನಿರೂಪಿಸಿದರು. ಮೊಹಮದ್ ನವಾಝ್ ವಂದಿಸಿದರು. ಪ್ರಸ್ತುತ ಪ್ರಜಾಪ್ರಭುತ್ವ ಭಾರತದ ಹೆಮ್ಮೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಕೆಲವರು ಸೋತಿರಬಹುದು. ಪ್ರಜಾಪ್ರಭುತ್ವದ ರಕ್ಷಣೆಗೆ ಇಂದಿನ ತಲೆಮಾರಿನ ಯುವಕರು ಮುಂದೆ ಬರಬೇಕು. ಕೋಮುಗಲಭೆ, ಹಿಂಸೆ ಇಲ್ಲದಿರುವ ಬಲಿಷ್ಠ ಭಾರತವನ್ನು ಕಟ್ಟಬೇಕಾಗಿದೆ.