ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದ ಇಬ್ಬರು ಯುವತಿಯರು ಭಗ್ನ ಪ್ರೇಮಿಗಳಿಂದ ಹತ್ಯೆಗೀಡಾಗಿದ್ದಾರೆ. ಪ್ರೀತಿಸಲು ನಿರಾಕರಿಸಿದ್ದ ಕಾನೂನು ಪದವಿ ವಿದ್ಯಾರ್ಥಿನಿ ಅಮೃತಾಳನ್ನು ((24) ಬೆಂಗಳೂರಿನ ಜೀವನ್ ಭೀಮಾನಗರದ ಕೋಡಿಹಳ್ಳಿಯಲ್ಲಿ ನಡುರಸ್ತೆಯಲ್ಲೇ ಅಡ್ಡಗಟ್ಟಿದ ಸಹೋದರರಿಬ್ಬರು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ವಿಲ್ಸನ್ಗಾರ್ಡ್ನ ನಿವಾಸಿ ಧನುಷ್(24) ಹಾಗೂ ಆತನ ಸಹೋದರ ಸೂರ್ಯ (21)ನನ್ನು ಪೊಲೀಸರು ಬಂಧಿಸಿದ್ದಾರೆ. ಜು.13ರಂದು ನಡೆದ ಘಟನೆಯಲ್ಲಿ ತೀವ್ರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜು.15ರ ಸಂಜೆ ಮೃತಪಟ್ಟಿದ್ದಾಳೆ.
ಆರೋಪಿಗಳ ಪೈಕಿ ಧನುಷ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಈಗಾಗಲೇ ಮದುವೆಯಾಗಿ, ಒಂದು ಮಗು ಕೂಡ ಇದೆ. ಆದರೆ, ಕೌಟುಂಬಿಕ ಕಾರಣಕ್ಕೆ ಕೆಲ ವರ್ಷಗಳಿಂದ ದಂಪತಿಗೆ ವಿಚ್ಛೇದನವಾಗಿತ್ತು. ಇನ್ನು ಸೂರ್ಯ, ಫಾರ್ಮಸಿ ಕಂಪನಿಯಲ್ಲಿ ಸೇಲ್ಸ್ಮನ್ ಆಗಿದ್ದ. ಕೊಲೆಯಾದ ಅಮೃತಾ, ನಾಲ್ಕನೇ ವರ್ಷದ ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದಳು. ಜತೆಗೆ ಮನೆ ಸಮೀಪದಲ್ಲಿ ಪಿಜ್ಜಾ ಶಾಪ್ನಲ್ಲಿ ಪಾರ್ಟ್ ಟೈಂ ಕೆಲಸ ಮಾಡಿಕೊಂಡಿದ್ದಳು.
ಎರಡು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕಿದ್ದ ವೇಳೆ ಆರೋಪಿಗಳು ಹಾಗೂ ಯುವತಿ ಕುಟುಂಬ ಸದಸ್ಯರ ಪರಿಚಯವಾಗಿದೆ. ಇದೇ ವೇಳೆ ಧನುಷ್ ಮತ್ತು ಅಮೃತಾ ಪರಿಚಯವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಧನುಷ್ಗೆ ಮದುವೆಯಾಗಿ, ಮಗು ಇರುವುದು ಮತ್ತು ಬೇರೊಂದು ಯುವತಿ ಜತೆ ಸಂಬಂಧ ಹೊಂದಿದ್ದ ವಿಚಾರ ತಿಳಿದ ಅಮೃತಾ, ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆಗಿತ್ತು. ಬಳಿಕ ಎರಡೂ ಕುಟುಂಬ ಸದಸ್ಯರು ಸಂಧಾನ ಮಾಡಿಕೊಂಡಿದ್ದರು.
ಮನೆಯ ಸಮೀಪದಲ್ಲೇ ಇರುವ ಪಿಜ್ಜಾ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಅಮೃತಾ, ಜುಲೈ 13ರ ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಕೋಡಿಹಳ್ಳಿಯ ಎಚ್ಎಎಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮಾರಕಾಸ್ತ್ರಗಳಿಂದ ಸಾರ್ವಜನಿಕವಾಗಿಯೇ ಸೂರ್ಯ ದಾಳಿ ನಡೆಸಿ, ಅಮೃತಾಳ ಎದೆ, ಬೆನ್ನಿಗೆ ಐದಾರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ವೇಳೆ ಅಣ್ಣ ಧನುಷ್ ಕೂಡ ಇದ್ದ. ಪ್ರಾಥಮಿಕ ವಿಚಾರಣೆಯಲ್ಲಿ ಧನುಷ್ ಸೂಚನೆ ಮೇರೆಗೆ ಕೃತ್ಯ ನಡೆದಿದೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಯಿ ಮಗಳ ಹತ್ಯೆಗೆ ಸಂಚು!
ಅಮೃತಾ ತಾಯಿ ಮಂಜುಳಾ ಚೀಟಿ ವ್ಯವಹಾರ ಮಾಡುತ್ತಿದ್ದರು. ಅವರ ಬಳಿ ಆರೋಪಿಗಳಿಬ್ಬರು ಮೂರೂವರೆ ವರ್ಷಗಳಿಂದ ಚೀಟಿ ಕಟ್ಟಿದ್ದರು. ಆದರೆ, ಆರ್ಥಿಕ ಸಮಸ್ಯೆ ಇರುವುದರಿಂದ ಸದ್ಯ ಹಣ ಕೊಡಲು ಸಾಧ್ಯವಿಲ್ಲ ಎಂದು ಮಂಜುಳಾ ತಿಳಿಸಿದ್ದರು. ಹೀಗಾಗಿ ಹಣಕಾಸು ವಿಚಾರಕ್ಕೆ ಮಂಜುಳಾ ಹಾಗೂ ಪ್ರೀತಿ ನಿರಾಕರಿಸಿದ ಅಮೃತಾ ವಿರುದ್ಧ ಸಹೋದರರು ದ್ವೇಷ ಸಾಧಿಸುತ್ತಿದ್ದರು. ಇದರಿಂದ ತಾಯಿ, ಮಗಳು ಇಬ್ಬರನ್ನೂ ಹತ್ಯೆಗೈಯಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಲವಾರಿನಿಂದ ಕೊಚ್ಚಿ ಮರ್ಡರ್
ಕೆಲಸ ಬಿಟ್ಟು ಮನೆಗೆ ತೆರಳಲು ಗುರುವಾರ ಜಂಜೆ ಬಂಟ್ವಾಳದ ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಯುವತಿಯನ್ನು ದುಷ್ಕರ್ವಿು ಅಟ್ಟಾಡಿಸಿ ತಲವಾರಿನಿಂದ ಮಾರಣಾಂತಿಕವಾಗಿ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾನೆ.
ಬಂಟ್ವಾಳ ತಾಲೂಕು ಕಡೇಶಿವಾಲಯ ಕೊಡಂಗೆ ನಿವಾಸಿ ಬಾಳಪ್ಪ ಗೌಡ ಎಂಬುವರ ಪುತ್ರಿ ಲಾವಣ್ಯಾ ಗೌಡ(21) ಮೃತ ಯುವತಿ. ಹತ್ಯೆಗೈದ ಆರೋಪಿ ಆಕೆಯ ದೂರದ ಸಂಬಂಧಿ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ನಿವಾಸಿ ಚೇತನ್ ಗೌಡ(22) ಎಂದು ಗುರುತಿಸಲಾಗಿದೆ. ಆತ ಯುವತಿಯನ್ನು ಏಕಮುಖವಾಗಿ ಪ್ರೀತಿ ಸುತ್ತಿದ್ದು, ಪ್ರೇಮ ವೈಫಲ್ಯ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಚೇತನ್ ಗೌಡ ತಾನು ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಯುವತಿಯನ್ನು ಕೊಚ್ಚಿ ಕೊಲೆಗೈಯ್ಯುವ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನಾ ಸ್ಥಳದಲ್ಲಿ ಯುವತಿಯ ಬ್ಯಾಗ್, ಮೊಬೈಲ್ ಹಾಗೂ ತಲವಾರ್ ಪತ್ತೆಯಾಗಿದೆ. ಆರೋಪಿ ಚೇತನ್ ಗೌಡ ಯುವತಿಯನ್ನು ಹತ್ಯೆ ಮಾಡಲೆಂದೇ ಸಂಚು ರೂಪಿಸಿ ತನ್ನ ಬ್ಯಾಗ್ನಲ್ಲಿ ತಲವಾರ್ ತಂದಿದ್ದ. ಕಕ್ಕೆಪದವು ಬಸ್ ನಿಲ್ದಾಣಕ್ಕೆ ಬರುವರೆಗೆ ನಿಲ್ದಾಣದಲ್ಲಿ ತನ್ನ ಕಾರಿನಲ್ಲಿ ಕಾಯುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹತ್ಯೆಗೀಡಾದ ಯವತಿ ಬಡಕುಟುಂಬಕ್ಕೆ ಸೇರಿದವಳು. ತಂದೆ ಬಾಳಪ್ಪ ಗೌಡ ಕೃಷಿಕ. ತಾಯಿ ಗೃಹಿಣಿ. ಮೂವರು ಪುತ್ರಿಯರ ಪೈಕಿ ಲಾವಣ್ಯಾ ಕೊನೆಯವಳು. ಮೊದಲ ಪುತ್ರಿಗೆ ವಿವಾಹವಾಗಿದ್ದು, ಎರಡನೆಯವಳು ಉದ್ಯೋಗಿಯಾಗಿದ್ದಾಳೆ. ಘಟನಾ ಸ್ಥಳಕ್ಕೆ ಎಸ್ಪಿ ಡಾ.ಅರುಣ್ ಕೆ., ಎಎಸ್ಪಿ ಯಶ್ಕುಮಾರ್ ಶರ್ಮ, ನಗರ ಠಾಣಾ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಎಸ್ಐ ಸಂದೀಪ್ ಶೆಟ್ಟಿ, ಟ್ರಾಫಿಕ್ ಎಸ್ಐ ಆದರ್ಶ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
Laxmi News 24×7