ಹುಬ್ಬಳ್ಳಿ: ಮಾಂಜಾ ದಾರ ಮಾರಾಟಗಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವ್ಯಾಪ್ತಿಯಲ್ಲಿ ಒಟ್ಟು 12 ಕೇಸ್ ದಾಖಲಾಗಿದೆ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಿನ್ನೆ ಮಾಂಜಾ ದಾರದಿಂದ ಮಹಿಳೆಯೊಬ್ಬರ ಜೀವ ಕಳೆದುಕೊಂಡಿದ್ದಾರೆ. ಸಾಕಷ್ಟು ಜಾಗೃತಿ ಮೂಡಿಸಿದ್ರೂ ಒಂದು ಜೀವ ಹೋಗಿದೆ. ಹೀಗಾಗಿ ಮಾಂಜಾ ದಾರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಹುಬ್ಬಳ್ಳಿ – ಧಾರವಾಡ ಅವಳಿ ನಗರದ ವ್ಯಾಪ್ತಿಯಲ್ಲಿ ಬಿಎನ್‌ಎಸ್ 120ಬಿ ಅಡಿಯಲ್ಲಿ 12 ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಅವಳಿ ನಗರದಲ್ಲಿ ವಿವಿಧೆಡೆ ದಾಳಿ ಮಾಡಲಾಗಿದ್ದು, ಪಾಲಿಕೆ ಆಯುಕ್ತರಿಗೂ ಪತ್ರ ಬರೆದಿದ್ದೇವೆ. ಪಾಲಿಕೆ ಮತ್ತು ಹೆಸ್ಕಾಂ ಸಹಕಾರದಿಂದ ವಿದ್ಯುತ್ ಕಂಬ ಗಿಡಮರಗಳಲ್ಲಿ ಜೋತು ಬಿದ್ದ ಮಾಂಜಾ ದಾರ ತಗೆಸಲು ಕ್ರಮ ಕೈಗೊಳ್ಳಲಾಗಿದೆ. ಯಾರೇ ಮಾಂಜಾ ದಾರ ಬಳಕೆ ಮಾಡಿದ್ರೆ ತಕ್ಷಣವೇ 112ಗೆ ಮಾಹಿತಿ ನೀಡಿ, ನಿನ್ನೆಯ ಘಟನೆಯ ಹಿನ್ನೆಲೆ ಸ್ಥಳ ಪರಿಶೀಲನೆ ಮಾಡಿದ್ದೇವೆ. ಆ ಸಂದರ್ಭದಲ್ಲಿ ಯಾರೂ ಗಾಳಿಪಟ ಹಾರಿಸುತ್ತಿರಲಿಲ್ಲ. ಆದರೆ ಮರದಲ್ಲಿ ಮೂರು-ನಾಲ್ಕು ಗಾಳಿಪಟ ಸಿಲುಕಿಕೊಂಡಿದ್ದವು. ಅದರಲ್ಲೊಂದು ಹಾರಿ ರಸ್ತೆ ಮೇಲೆ ಬಂದಿದ್ದರಿಂದ ದುರ್ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ ಮತ್ತೊಂದು ಘಟನೆ ನಡೆದಿದೆ. ಮಾಂಜಾ ದಾರದಿಂದ ಬೈಕ್ ಸವಾರನ ಮೂಗಿಗೆ ಗಂಭೀರ ಗಾಯವಾಗಿದೆ. ಈ ಸಂಬಂಧವೂ ವಿದ್ಯಾನಗರ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ. ಮಾಂಜಾ ದಾರ ಮಾರಾಟ ಮತ್ತು ಬಳಕೆದಾರರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
Laxmi News 24×7