ಬೆಂಗಳೂರು: ಯಾವಾಗಲೂ ಕೇಂದ್ರ ಸರ್ಕಾರದ್ದು ಪ್ರಚಾರದ ಗಿಮಿಕ್ ಅಷ್ಟೇ ಎಂದು ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿ, ಯಾವಾಗಲೂ ಕೇಂದ್ರ ಸರ್ಕಾರದ್ದು ಪ್ರಚಾರದ ಗಿಮಿಕ್ ಅಷ್ಟೇ, ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ಆದರೆ ಮೋದಿ ಅವರು ಬಂದ ಮೇಲೆ ಇದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ. ಇದನ್ನು ಬಿಟ್ಟರೆ ಬೇರೇನೂ ಇಲ್ಲ. ಈ ಬಗ್ಗೆ ಒಂದು ಶ್ವೇತ ಪತ್ರವನ್ನು (ವೈಟ್ ಪೇಪರ್) ಅವರೇ ಬರೆದು ತರಬಹುದಿತ್ತಲ್ಲ. ಕೇಂದ್ರ ಹಣಕಾಸು ಇಲಾಖೆಯಿಂದ ಮೆಟ್ರೋಗಾಗಿ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಒಂದು ಶ್ವೇತಪತ್ರದಲ್ಲಿ ಅವರೇ ಬರೆದು ಕೊಡಬಹುದಲ್ಲವಾ? ಎಂದು ಪ್ರಶ್ನಿಸಿದ್ದಾರೆ.
ಸುಮ್ಮನೆ ಏಕೆ ಸುಳ್ಳು ಹೇಳಬೇಕು? ಅವರ ಬಳಿ ಪ್ರಾಮಾಣಿಕತೆ ಇದ್ದರೆ, ಮೆಟ್ರೋ ಅಭಿವೃದ್ಧಿಗೆ ತಾವು ಹೆಚ್ಚು ಹಣ ನೀಡಿರುವುದಾಗಿ ಅವರು ಏನು ಹೇಳಿಕೊಳ್ಳುತ್ತಿದ್ದಾರೋ, ದಯವಿಟ್ಟು ಆ ದಾಖಲೆಗಳನ್ನು ನೀಡಲಿ. ತೇಜಸ್ವಿ ಸೂರ್ಯ ಅವರಿಗೆ ಕೇಂದ್ರ ಸರ್ಕಾರದ ಬಗ್ಗೆ ಏನೂ ತಿಳಿದಿಲ್ಲ ಎಂದೆನಿಸುತ್ತದೆ. ಮೊದಲು ಕೇಂದ್ರ ಸರ್ಕಾರದ ಮೇಲೆ ಎಷ್ಟು ಸಾಲವಿದೆ ಎಂದು ಸೂರ್ಯ ಅವರನ್ನು ಕೇಳಿ. ಅವರು ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ ಅದು ಬೇರೆ ವಿಚಾರ. ಗುಜರಾತ್ ಪರಿಸ್ಥಿತಿ ಏನಾಗಿದೆ ಎಂದು ಕೇಳಿ. ಗುಜರಾತಿನ ಮೇಲೆ ಎಷ್ಟು ಸಾಲವಿದೆ ಎಂದು ಕೇಳಿ ಎಂದಿದ್ದಾರೆ.
ಈ ದೇಶದ ಮೇಲೆ ಎಷ್ಟು ಸಾಲವಿದೆ ಎಂದು ಕೇಳಿ? ಡಾಲರ್ ಎದುರು ರೂಪಾಯಿ ಮೌಲ್ಯ ಎಲ್ಲಿಗೆ ಹೋಗಿದೆ ಎಂದು ಕೇಳಿ? ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಷ್ಟೊಂದು ಏಕೆ ಹೆಚ್ಚಾಗಿದೆ? ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಸಹ, ಇಲ್ಲಿ ಬೆಲೆಯನ್ನು ಏಕೆ ಇಷ್ಟೊಂದು ಹೆಚ್ಚಿಸುತ್ತಿದ್ದಾರೆ ಎಂದು ಕೇಳಿ? ಅದಾನಿ ಇಷ್ಟೊಂದು ಲಾಭವನ್ನು ಹೇಗೆ ಗಳಿಸುತ್ತಿದ್ದಾರೆ ಎಂದು ಕೇಳಿ? ಅಂಬಾನಿ ಏಕೆ ಇಷ್ಟೊಂದು ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಳಿ ಇವುಗಳ ಬಗ್ಗೆ ಅವರು ಯಾವುದೇ ಉತ್ತರ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
Laxmi News 24×7