ತೆರಿಗೆ ವಂಚನೆ ಪ್ರಕರಣ – 2 ವರ್ಷ ವಿದೇಶಿ ಪ್ರವಾಸಕ್ಕೆ ತೆರಳಲು ಡಿಕೆಶಿಗೆ ಕೋರ್ಟ್‌ ಅನುಮತಿ

Spread the love

ಬೆಂಗಳೂರು: ತೆರಿಗೆ ವಂಚನೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ವಿಧಿಸಿದ್ದ ಜಾಮೀನು ಷರತ್ತಿನಲ್ಲಿ ಸಡಿಲಿಕೆ ಮಾಡಿರುವ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್‌ ಕೋರ್ಟ್‌ 2 ವರ್ಷ ವಿದೇಶ ಪ್ರವಾಸ ಕೈಗೊಳ್ಳಲು ಇತ್ತೀಚೆಗೆ ಅನುಮತಿ ನೀಡಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಕೆ.ಎನ್‌ ಶಿವಕುಮಾರ್‌ ಅವರು ವಿವಿಧ ದೇಶಗಳಿಗೆ ಅಧಿಕೃತ ಉದ್ಯಮ ಪ್ರವಾಸ ಕೈಗೊಳ್ಳಲು ಕೆಲವು ಷರತ್ತು ವಿಧಿಸಿ, ಶಿವಕುಮಾರ್‌ ಅವರಿಗೆ ಅನುಮತಿಸಿದ್ದಾರೆ.

ಪ್ರತಿ ಬಾರಿಯೂ ವಿದೇಶಕ್ಕೆ ತೆರಳುವಾಗ ಶಿವಕುಮಾರ್‌ ಅವರು ತಮ್ಮ ಪ್ರವಾಸ ವಿವರವನ್ನು ತನಿಖಾ ಸಂಸ್ಥೆಗೆ ಸಲ್ಲಿಸಬೇಕು. ನ್ಯಾಯಾಲಯ ನಿರ್ದೇಶಿಸಿದಾಗ ವಿಚಾರಗೆ ಹಾಜರಾಗಬೇಕು. ಈ ಷರತ್ತುಗಳನ್ನು ಶಿವಕುಮಾರ್‌ ಉಲ್ಲಂಘಿಸಿದರೆ ವಿದೇಶ ಪ್ರವಾಸಕ್ಕೆ ತೆರಳಲು ಅನುಮತಿಸಿರುವ ಆದೇಶ ರದ್ದುಪಡಿಸಲು ಪ್ರಾಸಿಕ್ಯೂಷನ್‌ ಮನವಿ ಮಾಡಬಹುದು ಎಂದು ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್‌ ಪಟೇಲ್‌ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಸೋಲಿಸಿ, ಗಾಂಧಿ ಕುಟುಂಬಕ್ಕೆ ಮುಖಭಂಗ ಮಾಡುವ ಬಿಜೆಪಿಯ ಪ್ರಯತ್ನಕ್ಕೆ ತಡೆಯೊಡ್ಡಲು 2017ರ ಆಗಸ್ಟ್‌ನಲ್ಲಿ ಗುಜರಾತ್‌ನ ಕಾಂಗ್ರೆಸ್‌ ಶಾಸಕರಿಗೆ ಬೆಂಗಳೂರಿನ ಬಿಡದಿ ಸಮೀಪದ ಈಗಲ್ಟನ್‌ ರೆಸಾರ್ಟ್‌ನಲ್ಲಿ ನೆರವು ಕಲ್ಪಿಸಲಾಗಿತ್ತು. ಈ ಉಸ್ತುವಾರಿ ವಹಿಸಿಕೊಂಡಿದ್ದ ಶಿವಕುಮಾರ್‌ ಅವರನ್ನು ಗುರಿಯಾಗಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿ.ಕೆ ಶಿವಕುಮಾರ್‌ ಮತ್ತು ಅವರ ಬೆಂಬಲಿಗರಿಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ನಡೆಸಿದ್ದರು.

ಇದರ ಮುಂದುವರಿದ ಭಾಗವಾಗಿ ತೆರಿಗೆ ವಂಚನೆ ಆರೋಪದ ಮೇಲೆ ಡಿ.ಕೆ ಶಿವಕುಮಾರ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನೀಲ್‌ ಕುಮಾರ್‌ ಶರ್ಮಾ ಮತ್ತು ಅವರ ಸಹೋದರ ಸಚಿನ್‌ ನಾರಾಯಣ್‌, ಆಂಜನೇಯ ಹನುಮಂತಯ್ಯ ಮತ್ತು ಎನ್‌ ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯಿದೆ ಸೆಕ್ಷನ್‌ಗಳಾದ 276C(1), 277, 278 ಮತ್ತು ಐಪಿಸಿ ಸೆಕ್ಷನ್‌ಗಳಾದ 193, 199 ಮತ್ತು 120ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಈಗಲ್ಟಟನ್‌ ರೆಸಾರ್ಟ್‌ನಲ್ಲಿ ಶೋಧ ನಡೆಸುತ್ತಿದ್ದಾಗ ಶಿವಕುಮಾರ್‌ ಅವರು ಪ್ರಮುಖ ಸಾಕ್ಷಿಯನ್ನು ನಾಶಪಡಿಸಿದ್ದಾರೆ ಎಂದು ಐಟಿ ಇಲಾಖೆ ಆರೋಪಿಸಿತ್ತು. ಆದರೆ, ಶಿವಕುಮಾರ್‌ ಅವರು ಆರೋಪವು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್‌ಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯವು ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂಬ ಷರತ್ತು ವಿಧಿಸಿತ್ತು. ಇದರ ಭಾಗವಾಗಿ ವೈಯಕ್ತಿಕ ಉದ್ಯಮ ಮತ್ತು ಸರ್ಕಾರದ ಮಂತ್ರಿಯಾಗಿ ವಿದೇಶಕ್ಕೆ ತೆರಳಲು ಶಿವಕುಮಾರ್‌ ಅವರು ಅನುಮತಿ ಕೋರಿದ್ದರು.

ಆರೋಪಿಯು ತನ್ನ ಉದ್ಯಮದ ಅಭಿವೃದ್ಧಿ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಮತ್ತು ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದು, ವಿವಿಧ ಯೋಜನೆಯ ಭಾಗವಾಗಿ ಹಲವು ದೇಶಗಳಿಗೆ ಭೇಟಿ ನೀಡುವ ಅಗತ್ಯವಿದೆ. ಈ ನೆಲೆಯಲ್ಲಿ ವಿದೇಶಕ್ಕೆ ಅನುಮತಿ ಕೋರಿರುವ ಆಧಾರದಲ್ಲಿ ಸತ್ಯಾಂಶ ಮತ್ತು ಪ್ರಾಮಾಣಿಕತೆ ಇದ್ದಂತೆ ಕಾಣುತ್ತಿದೆ ಎಂದು ನ್ಯಾಯಾಲಯವು ಮೇ 15ರ ಆದೇಶದಲ್ಲಿ ಹೇಳಿದೆ.

ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಇನ್ನೊಬ್ಬ ವ್ಯಕ್ತಿಗೆ 8 ತಿಂಗಳು ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿಸಲಾಗಿತ್ತು. ಹೀಗಾಗಿ, ಶಿವಕುಮಾರ್‌ಗೆ ಅನುಮತಿ ನಿರಾಕರಿಸಲು ಸಕಾರಣವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹಾಲಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ, ಪ್ರಕರಣಕ್ಕೆ ತಡೆಯಾಜ್ಞೆ ತಂದಿರುವುದರಿಂದ ಸರ್ವೋಚ್ಚ ನ್ಯಾಯಾಲಯವು ಮುಂದಿನ ಆದೇಶ ಮಾಡುವವರೆಗೆ ವಿಚಾರಣೆಯಲ್ಲಿ ಶಿವಕುಮಾರ್‌ ಖುದ್ದಾಗಿ ಭಾಗವಹಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

2022ರ ಮಾರ್ಚ್‌ 28ರಿಂದ ಏಪ್ರಿಲ್‌ 3ರವರೆಗೆ ದುಬೈಗೆ ತೆರಳಲು ಈ ಹಿಂದೆ ನ್ಯಾಯಾಲಯ ಅನುಮತಿಸಿತ್ತು.


Spread the love

About Laxminews 24x7

Check Also

ಮಾಜಿ ಸಚಿವ ವೆಂಕಟರಮಣಪ್ಪ ಅಗಲಿಕೆಗೆ ಜಿ.ಪರಮೇಶ್ವರ್‌ ಕಂಬನಿ

Spread the loveತುಮಕೂರು: ಗೃಹ ಸಚಿವ ಡಾ. ಜಿ.ಪರಮೇಶ್ವರ್‌  ಅವರು ಪಾವಗಡ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ