ಹುಬ್ಬಳ್ಳಿ, ಜ.28- ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟಕ್ಕೆ ಪಿಎಫ್‍ಐ ಸಂಘಟನೆಗೆ ಅಕ್ರಮ ಹಣ ಹರಿದು ಬಂದಿದ್ದಲ್ಲಿ ಸಮಗ್ರ ತನಿಖೆಯಾಗಲಿ; ಆರೋಪ ಸಾಬೀತುಪಡಿಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿರುದ್ಧ ಹೋರಾಟ ನಡೆಸಲು ಪಿಎಫ್‍ಐ ಸಂಘಟನೆಗೆ ಅಕ್ರಮ ಹಣ ಬಂದಿದ್ದಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ತಿಳಿಸಿದರು. ಸಿಎಎ ಸಂವಿಧಾನಕ್ಕೆ ವಿರುದ್ಧವಾದಂತಹ ಕಾಯಿದೆ. ಜಾತಿ, ಧರ್ಮ ಆಧಾರದ ಮೇಲೆ ಈ ಕಾಯ್ದೆಯನ್ನು ಜಾರಿಮಾಡಿದ್ದಾರೆ. ಕಾಂಗ್ರೆಸ್ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದರು.
ಶೀಘ್ರ ನೇಮಕ: ಕೆಪಿಸಿಸಿ ಅಧ್ಯಕ್ಷರನ್ನು ಹೈಕಮಾಂಡ್ ನಾಯಕರು ಶೀಘ್ರವೇ ನೇಮಕ ಮಾಡಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಈ ಸಂಬಂಧ ನಮ್ಮ ಅಭಿಪ್ರಾಯವನ್ನು ಹೈಕಮಾಂಡ್‍ಗೆ ತಿಳಿಸಿದ್ದೇವೆ. ಹೈಕಮಾಂಡ್ ಶೀಘ್ರವೇ ಅಧ್ಯಕ್ಷರನ್ನು ನೇಮಕ ಮಾಡಲಿದೆ ಎಂದು ಹೇಳಿದರು
ಬಿಎಸ್‍ವೈ ಸಂಕಷ್ಟದಲ್ಲಿ: ಬಿಜೆಪಿ ರಾಷ್ಟ್ರ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡಿಲ್ಲ. ಅವರಿಗೆ ಸ್ವತಂತ್ರ ಕೊಡುತ್ತಿಲ್ಲ. ಹೀಗಾಗಿ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೆಂಬುದಿಲ್ಲ. ಸಚಿವ ಸಂಪುಟ ವಿಸ್ತರಣೆಗೆ ಅವರ ಹೈಕಮಾಂಡ್ ಸಮ್ಮತಿ ನೀಡಿಲ್ಲ. ಸಿಎಂಗೆ ಯಾವುದೇ ಸ್ವಾತಂತ್ರ್ಯ ಕೊಟ್ಟಿಲ್ಲ. ಅವರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸಂಪುಟ ವಿಸ್ತರಣೆ ವಿಳಂಬಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಕೇಂದ್ರದಿಂದ ರಾಜ್ಯಕ್ಕೆ ಆರ್ಥಿಕ ನೆರವು ಬಿಡುಗಡೆಯಾಗುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಪಾಲು ಬರುತ್ತಿಲ್ಲ. ಹಾಗಾಗಿ ರಾಜ್ಯವು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಅವರು ಹೇಳಿದರು.
ವಕೀಲಿಕೆ ವೃತ್ತಿ ಇಲ್ಲ: ನನ್ನ ವಕೀಲಿಕೆ ವೃತ್ತಿಯ ಸನ್ನದು ರದ್ದಾಗಿತ್ತು. ಅದನ್ನು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದೇನೆ. ನಲ್ವತ್ತು ವರ್ಷಗಳ ನಂತರ ಆ ವೃತ್ತಿ ಮಾಡಲು ಸಾಧ್ಯವೇ ಎಂದು ಸಿದ್ದರಾಮಯ್ಯನವರು ಮತ್ತೆ ವಕೀಲಿಕೆ ವೃತ್ತಿ ಆರಂಭಿಸಲಿದ್ದಾರೆ ಎಂಬ ವದಂತಿಗೆ ತೆರೆ ಎಳೆದರು.