ಬೆಂಗಳೂರು : ಕೊರೊನಾ ಸೋಂಕಿನ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಏಳು, ಎಂಟು ಮತ್ತು ಒಂಭತ್ತನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನ ರದ್ದು ಮಾಡಲಾಗಿದ್ದು,ಈ ಮೂರು ವರ್ಗದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ (ಪಾಸ್) ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
ಗುರುವಾರ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ,ಎಸ್.ಸುರೇಶ್ ಕುಮಾರ್ ಈ ಹಿಂದೆ ಒಂದರಿಂದ ಆರನೇ ತರಗತಿಯವರೆಗೆ ಮಕ್ಕಳನ್ನು ಪಾಸ್ ಮಾಡಲು ಸೂಚಿಸಲಾಗಿತ್ತು. ಆದರೆ ಈಗ ಏಳು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳನ್ನು ಕೂಡಾ ಯಾವುದೇ ಪರೀಕ್ಷೆ ನಡೆಸದೇ ಮುಂದಿನ ತರಗತಿಗೆ ಉತ್ತೀರ್ಣ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಈ ಹಿಂದೆ 1 ರಿಂದ 6ನೇ ತರಗತಿವರೆಗಿನ ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು. ಗುರುವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ, ಈಗ 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಉತ್ತೀರ್ಣ ಮಾಡಬೇಕು ಎಂದು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ವಿದ್ಯಾರ್ಥಿಗಳಿಗೆ ಫಾರ್ಮೇಟೀವ್ (ರೂಪಣಾತ್ಮಕ), ಸಮ್ಮೇಟೀವ್( ಸಂಕಲನಾತ್ಮಕ) ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರ ಆಧಾರದ ಮೇಲೆ 10ನೇ ತರಗತಿಗೆ ಪಾಸ್ ಮಾಡಲಾಗುತ್ತದೆ.
ಈ ಎರಡು ಆಂತರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇರುವ ವಿದ್ಯಾರ್ಥಿಗಳಿಗೆ ರಜಾ ಅವಧಿಯಲ್ಲಿ ಶಾಲೆಗಳು ಸೂಕ್ತ ಮಾರ್ಗದರ್ಶನ ನೀಡಿ, ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೂಕ್ತ ಪರೀಕ್ಷೆ ನಡೆಸಿ ಉತ್ತೀರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಈ ವರ್ಷ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸಲು ಇಚ್ಛಿಸಲಾಗಿತ್ತು. ಆದರೆ ಈ ಕೋವಿಡ್-19 ಕಳವಳದ ಸಂದರ್ಭದಲ್ಲಿ ಇದು ನಡೆಸಲು ಸಾಧ್ಯವಿಲ್ಲ. ಆ ಕಾರಣದಿಂದ ಎಂಟನೇ ತರಗತಿ ಆರಂಭವಾದ ಪ್ರಾರಂಭದಲ್ಲಿ ಮೌಲ್ಯಾಂಕನ ನಡೆಸಲಾಗುವುದು. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿದೆ. ಏಪ್ರಿಲ್ 14ರ ನಂತರ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.