ನೆಲಮಂಗಲ: ಪ್ರಪಂಚದಾದ್ಯಂತ ಕೊರೊನಾ ಮಾಹಾಮಾರಿ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ಭಾರವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಸಮಯದಲ್ಲಿ ನಿದ್ದೆ, ಊಟ, ಸಂಬಂಧಗಳನ್ನು ಬಿಟ್ಟು ಕೆಲಸ ಮಾಡುವವರನ್ನು ನೋಡಿದ್ದೇವೆ. ಕೊರೊನಾ ವಾರಿಯರ್ಸ್ ವೈದ್ಯರು, ಪೊಲೀಸರು, ಆಶಾಕಾರ್ಯಕರ್ತೆಯರು ಹಾಗೂ ಮಾಧ್ಯಮದವರು ಸಹ ಸಾರ್ವಜನಿಕರಿಗೆ ಮಾಹಿತಿ ಜೊತೆಗೆ ಕೊರೊನಾ ಹೋಗಲಾಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಅನೇಕರ ಮಧ್ಯೆ ಎತ್ತರಕ್ಕೆ ನಿಲ್ಲುತ್ತಾರೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಂಜನ್ ಕುಮಾರ್.
ಹೌದು. ಕೊರೊನಾ ಎನ್ನುವ ಮಹಾಮಾರಿ ಕಾಣಿಸಿಕೊಂಡಾಗ ಅಂಜನ್ ಕುಮಾರ್ ದಂಪತಿಗೆ ಗಂಡು ಮಗು ಜನನವಾಗಿ ಕೆಲ ದಿನಗಳಷ್ಟೆ ಆಗಿತ್ತು. ಆ ಸಮಯದಲ್ಲೂ ಕೂಡ ಮಗುವಿನ ಜೊತೆಗೆ ಕಳೆದಿದ್ದು ಕೆಲವೇ ಕೆಲವು ದಿನಗಳು ಮಾತ್ರ. ಅಷ್ಟರಲ್ಲೇ ಮಹಾಮಾರಿ ಕೊರೊನಾದಿಂದ ದೇಶವೇ ಲಾಕ್ ಡೌನ್ ಆಗೋಯ್ತು. ಜೊತೆಗೆ ಅಂಜನ್ ಕುಮಾರ್ ಸಹ ಕೊರೊನಾ ಮಾಹಾಮಾರಿ ಜೊತೆ ಹೋರಾಡಲು ಸಿದ್ಧರಾದರು.
ಪ್ರತಿದಿನ ನೆಲಮಂಗಲ ಗ್ರಾಮಾಂತರ ಪ್ರದೇಶದಿಂದ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ತಪಾಸಣೆ ಮಾಡುವ ಜವಬ್ದಾರಿಯನ್ನು ಹೊತ್ತ ಅವರು, ಹಗಲಿರುಳು ಎನ್ನದೆ ಕೊರೊನಾ ಯುದ್ಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಪ್ರತಿದಿನ ಕೊರೊನಾ ಟೆಸ್ಟ್ ಮಾಡುತ್ತಿದ್ದರಿಂದ ತನ್ನ ಮಗು ಹೆಂಡತಿ ಹಾಗೂ ತಂದೆ ತಾಯಿಯನ್ನು ನೋಡಲು ಆಗದ ಪರಿಸ್ಥಿತಿ ಅಂಜನ್ ಕುಮಾರ್ ಅವರದ್ದು. ಹೀಗಾಗಿ ಮನೆಗೂ ಹೋಗದೆ, ಮೊಬೈಲ್ ನಲ್ಲಿಯೇ ತನ್ನ ಮಗು, ಪತ್ನಿ ಹಾಗೂ ತಂದೆ-ತಾಯಿಯ ಜೊತೆ ಸಂಪರ್ಕಿಸಿ ಅವರಿಗೂ ಧೈರ್ಯ ತುಂಬುವಂತ ಕೆಲಸ ಮಾಡುತ್ತಿದ್ದಾರೆ.