Breaking News
Home / ಅಂತರಾಷ್ಟ್ರೀಯ / ಬ್ರಹ್ಮಕುಮಾರಿ ಸಂಸ್ಥೆಯ ದಾದಿ ಜಾನಕಿ ಅವರು ೧೦೪ನೆ ವಯಸ್ಸಿನಲ್ಲಿ ತಮ್ಮ ದೇಹವನ್ನು ಬೆಳಗಿನ ಜಾವ ೨ ಘಂಟೆಗೆ ಮೌಂಟ್ ಆಬುವಿನ ಗ್ಲೋಬಲ್ ಆಸ್ಪತ್ರೆಯಲ್ಲಿ ತ್ಯಜಿಸಿದರು.

ಬ್ರಹ್ಮಕುಮಾರಿ ಸಂಸ್ಥೆಯ ದಾದಿ ಜಾನಕಿ ಅವರು ೧೦೪ನೆ ವಯಸ್ಸಿನಲ್ಲಿ ತಮ್ಮ ದೇಹವನ್ನು ಬೆಳಗಿನ ಜಾವ ೨ ಘಂಟೆಗೆ ಮೌಂಟ್ ಆಬುವಿನ ಗ್ಲೋಬಲ್ ಆಸ್ಪತ್ರೆಯಲ್ಲಿ ತ್ಯಜಿಸಿದರು.

Spread the love

ಮೌಂಟ್ ಆಬು: ಬ್ರಹ್ಮಕುಮಾರಿ ಸಂಸ್ಥೆಯ ದಾದಿ ಜಾನಕಿ ಅವರು ೧೦೪ನೆ ವಯಸ್ಸಿನಲ್ಲಿ ತಮ್ಮ ದೇಹವನ್ನು ಬೆಳಗಿನ ಜಾವ ೨ ಘಂಟೆಗೆ ಮೌಂಟ್ ಆಬುವಿನ ಗ್ಲೋಬಲ್ ಆಸ್ಪತ್ರೆಯಲ್ಲಿ ತ್ಯಜಿಸಿದರು.

ಅವರು ೨ ತಿಂಗಳುಗಳಿಂದ ಶ್ವಾಸಕೋಷ ಮತ್ತು ಕರುಳು ಬೇನೆಗೋಸ್ಕರ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಅಂತಿಮ ಸಂಸ್ಕಾರ ಶಾಂತಿವನದಲ್ಲಿ ಮಧ್ಯಾನ್ಹ ೩.೩೦ಕ್ಕೆ ನಡೆಯಲಿದೆ. ವಿಶ್ವದಾದ್ಯಂತ ಆಧ್ಯಾತ್ಮಿಕತೆಯನ್ನು ಪಸರಿಸುವ ಸೇವೆಯನ್ನು ದಾದಿ ಜಾನಕಿ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮಾಡಿದ್ದಾರೆ.
ವರ್ತಮಾನದಲ್ಲಿ ಪಾಕಿಸ್ತಾನದಲ್ಲಿರುವ ಸಿಂಧ್ ಹೈದರಾಬಾದ್ ಪ್ರಾಂತ್ಯದಲ್ಲಿ ದಾದಿ ಜಾನಕಿ ೧ ಜನವರಿ ೧೯೧೬ ರಲ್ಲಿ ಜನಿಸಿದರು. ಬಾಲ್ಯದಿಂದಲೂ ಶಾಂತಿ ಹಾಗೂ ಪ್ರೇಮದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ದಾದಿ ಜಾನಕಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಪರ್ಕಕ್ಕೆ ಬರುವ ಮುನ್ನ ಅನೇಕ ಆಧ್ಯಾತ್ಮಿಕ ಸೇವಾ-ಸಂಸ್ಥೆಗಳಲ್ಲಿ ಭಾಗವಹಿಸಿದ್ದರು.

ಬಾಲ್ಯದಿಂದಲೇ ಅನ್ಯರ ಜೀವನವನ್ನು ಹೇಗೆ ಸುಖಿ ಮಾಡಬೇಕು ಎಂಬ ಚಿಂತೆ ಇರುತ್ತಿತ್ತು. ಅವರ ಪ್ರಾರಂಭಿಕ ಶಿಕ್ಷಣವು ಅನೇಕ ಭಾರತೀಯ ಶಾಸ್ತ್ರಗಳ ಅಧ್ಯಯನದಿಂದ ತುಂಬಿತ್ತು. ಆ ಶಿಕ್ಷಣಗಳು ಅವರ ಜೀವನದಲ್ಲಿ ತುಂಬಿಹೋಗಿದ್ದವು ಮತ್ತು ಕಂಠಪಾಠವಾಗಿದ್ದವು.
೧೯೩೭ರಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಪರ್ಕದಲ್ಲಿ ಬಂದರು. ಸಂಸಾರದ ದು:ಖ-ಸಾಗರದಲ್ಲಿ ಮುಳುಗಿರುವ ಇವರು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಸ್ಥಾಪಕರಾದ ದಾದ ಲೇಖರಾಜ್(ಬ್ರಹ್ಮಾಬಾಬಾ)ರವರನ್ನು ಭೇಟಿ ಮಾಡಿದರು. ಬ್ರಹ್ಮಾಬಾಬಾರವರ ತನುವಿನಲ್ಲಿ ನಿರಾಕಾರ ಪರಮಾತ್ಮನ ಅವತರಣೆಯನ್ನು ಕಣ್ಣಾರೆ ಕಂಡ ಇವರು ತಮ್ಮ ದು:ಖ-ದುಮ್ಮಾನಗಳನ್ನು ಮರೆತರು.
ಈಶ್ವರೀಯ ವಿಶ್ವ ವಿದ್ಯಾಲಯವು ಸಿಂಧ್ ಹೈದರಾಬಾದ್(ವರ್ತಮಾನದಲ್ಲಿ ಪಾಕಿಸ್ತಾನದಲ್ಲಿದೆ) ನಿಂದ ಕ್ರಿ.ಶ ೧೯೫೦ ರಲ್ಲಿ ಭಾರತದ ಮೌಂಟ್ ಅಬುವಿಗೆ ಸ್ಥಳಾಂತರವಾಯಿತು. ೧೯೩೭ ರಿಂದ ೧೯೫೧ರವರೆಗೆ ಸತತ ೧೪ ವರ್ಷಗಳ ಕಾಲ ತ್ಯಾಗ-ತಪಸ್ಸುನ್ನು ಮಾಡಿದ ದಾದಿ ಜಾನಕಿಯವರನ್ನು ಭಾರತಾದ್ಯಂತ ಸೇವೆಯನ್ನು ಸಲ್ಲಿಸಲು ಕಳುಹಿಸಲಾಯಿತು.

ಭಾರತದ ಅನೇಕ ರಾಜ್ಯಗಳಲ್ಲಿ ಸಂಚರಿಸಿ  ಮನುಷ್ಯಾತ್ಮರಿಗೆ ಜ್ಞಾನ-ರತ್ನಗಳನ್ನು ನೀಡಿ ಜಾಗೃತರನ್ನಾಗಿ ಮಾಡಿ ಅವರ ಜೀವನವನ್ನು ಪರಿವರ್ತಿಸಿದರು. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಕ್ರಿ.ಶ ೧೯೭೪ರಲ್ಲಿ ವಿಶ್ವದ ಸೇವೆಗಾಗಿ ಮೊಟ್ಟಮೊದಲಿಗೆ ಇಂಗ್ಲೆಂಡ್‌ನ ಲಂಡನ್‌ಗೆ ಕಳುಹಿಸಲಾಯಿತು.

ದಾದಿ ಜಾನಕಿಯವರಿಗೆ ಹಿಂದಿ ಮತ್ತು ಸಿಂಧಿಯ ಹೊರತು ಬೇರೆ ಯಾವ ಭಾಷೆಗಳೂ ಬರುತ್ತಿರಲಿಲ್ಲ. ಇಂಗ್ಲೀಷ್ ಬಲ್ಲವರಾದ ಬ್ರಹ್ಮಾಕುಮಾರಿ ಜಯಂತಿಯವರೊಂದಿಗೆ ಒಡಗೂಡಿ ಲಂಡನ್ ಸೇವಾಕೇಂದ್ರವನ್ನು ವಿದೇಶ ಸೇವೆಯ ಕೇಂದ್ರವನ್ನಾಗಿ ಮಾಡಿಕೊಂಡು ವಿಶ್ವದಾದ್ಯಂತ ಇಂದು ೧೪೦ ರಾಷ್ಟ್ರಗಳಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಿ ಭಾರತೀಯ ಸಂಸ್ಕೃತಿಯ ಕೀರ್ತಿ-ಪತಾಕೆಯನ್ನು ಹಾರಿಸಿದ್ದಾರೆ.

ಯಾವುದೇ ಒಂದು ದೈಹಿಕ ಧರ್ಮದ ಪ್ರವಚನವನ್ನು ನೀಡದೇ ವಸುಧೈವ ಕುಟುಂಬಕಮ್‌ನ ಉದಾರ ಭಾವನೆಯನ್ನು ಹರಡುತ್ತಾ ಒಂದೇ ವಿಶ್ವ ಒಬ್ಬನೇ ಪರಮಾತ್ಮನೆಂಬ ಮಹಾನತೆಯನ್ನು ವಿಶ್ವದಾದ್ಯಂತ ಸಾರಿದ್ದರು.
ಅನೇಕ ವಿಶ್ವ ಧರ್ಮ ಸಮ್ಮೇಳನಗಳಲ್ಲಿ ಭಾಗವಹಿಸಿ ಭಾರತದ ಸಂಸ್ಕೃತಿಯ ಪರಿಚಯವನ್ನು ನೀಡಿದ್ದರು. ಇವರ ಗೌರವಾರ್ಥವಾಗಿ ಲಂಡನ್‌ನಲ್ಲಿ ’ಜಾನಕಿ ಫೌಂಡೇಶನ್ ಫಾರ್ ಗ್ಲೋಬಲ್ ಹೆಲ್ತ್ ಕೇರ್’ ಎಂಬ ಸಂಘಟನೆಯನ್ನು ಸ್ಥಳೀಯ ಲಂಡನ್ ನಿವಾಸಿಗಳು ಸ್ಥಾಪಿಸಿ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ. ಜಾನಕಿ ದಾದಿಯವರ ವಿಚಾರಗಳನ್ನು ಹೊಂದಿರುವಂತಹ ಅನೇಕ ಪುಸ್ತಕಗಳು ಪ್ರಕಾಶಿತವಾಗಿವೆ: ವಿಂಗ್ಸ್ ಆಫ್ ಸೋಲ್, ಪರ್ಲ್ಸ್ ಆಫ್ ವಿಜಡಮ್, ಕಂಪೇನಿಯನ್ ಆಫ್ ಗಾಡ್, ಇನ್‌ಸೈಡ್ ಔಟ್.
ವಿಶ್ವದಾದ್ಯಂತ ನೀಡಿದ ಪ್ರವಚನಗಳು:
೧. ಸೆಂಟರ್ ಆಫ್ ಎಕ್ಸ್‌ಲೆನ್ಸ್ ಇನ್ ವುಮೆನ್ ಹೆಲ್ತ್, ಕ್ಯಾಲಿಫೋರ್ನಿಯಾ ಮತ್ತು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಮುಖ್ಯ ಭಾಷಣಕಾರರಾಗಿ ಮಹಿಳಾ-ಸಬಲೀಕರಣದ ಬಗ್ಗೆ ಜಾಗೃತಿಯನ್ನು ನೀಡಿದ್ದರು.
೨. ಸೆಕ್ರಾಮೆಂಟ್‌ನ ಸ್ಪಿರಿಚ್ಯುಯಲ್ ಲೈಫ್ ಸೆಂಟರ್‌ನ ಹಿರಿಯರಾದ ಮೈಕೆಲ್ ಮೋರೆನ್‌ರೊಂದಿಗೆ ಸೀಕ್ರೇಟ್ ಆಫ್ ಟ್ರಾನ್ಸ್‌ಫಾರ್‌ಮೇಶನ್ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದ್ದರು.
೩. ದಾದಿ ಜಾನಕಿರಯವರು ಆಂಡ್ರ್ಯೂ ಪೊವೆಲ್‌ರವರೊಂದಿಗೆ ಆಕ್ಸ್‌ಫರ್ಡ್ ಟೌನ್‌ಹಾಲ್‌ನ್ಲಿ ’ಜೀವನವನ್ನು ಹೇಗೆ ನಡೆಸಬೇಕು ಮತ್ತು ಮೃತ್ಯುವಿನ ಮೇಲೆ ಹೇಗೆ ಸ್ವೀಕರಿಸಬೇಕು’ ಎಂಬ ವಿಷಯವನ್ನು ಮನದಟ್ಟು ಮಾಡಿದ್ದರು.
೪. ಲಂಡನ್‌ನಲ್ಲಿ ಆಯೋಜಿತವಾದ ಮೂರು ದಿವಸ ಸಮ್ಮೇಳನದಲ್ಲಿ ’ಬಿ ದ ಚೆಂಜ್’ ನ ಎರಡನೇ ದಿನ ’ಮನುಷ್ಯ ಮತ್ತು ಅವರ ಗ್ರಹ’ ಎಂಬ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದ್ದರು.
೫. ಮಾಸ್ಕೋದ ಸ್ಥಳೀಯ ಸಂಸ್ಥೆಯೊಂದು ದೆಹಲಿಯಲ್ಲಿ ನಡೆಸಿದ ಇಂಟರ್‌ನ್ಯಾಷನಲ್ ಕಾಂಗ್ರೆಸ್ ಆಫ್ ಮದರ‍್ಸ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿದ್ದರು.
೬. ಜೆರುಸಲೇಮ್‌ನಲ್ಲಿ ಸಂಪನ್ನವಾದ ವರ್ಲ್ಡ್ ಕಾಂಗ್ರೆಸ್ ಆಫ್ ಲಿಲೀಜಿಯಸ್ ಲೀಡರ್‌ನ ಸಮ್ಮೇಳನದಲ್ಲಿ ದಾದಿಯವರು ಭಾಗವಹಿಸಿದ್ದರು.
೭. ಬಂಕಿಗ್‌ಹ್ಯಾಮ್‌ನಲ್ಲಿ ಆಯೋಜಿತವಾದ ’ರೆಸ್ಪೆಕ್ಟ್, ಇಟ್ ಆಲ್ ಅಬೌಟ್ ಟೈಮ್’ ಎಂಬ ಕಾರ್ಯಕ್ರಮದಲ್ಲಿ ದಾದಿಯವರು ಪ್ರಿಂಸ್ ಆಫ್ ವೆಲ್ಸ್ ಸಮೇತ ಅನೇಕ ಆಧ್ಯಾತ್ಮಿಕ ನಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು.
೮. ಮ್ಯಾಂಡ್ರಿಡ್‌ನಲ್ಲಿ ನಡೆದ ದ್ವಿತೀಯ ವರ್ಲ್ಡ್ ಅಸೆಂಬ್ಲಿ ಆನ್ ಎಜಿಂಗ್’ನ್ನು ಉದ್ದೇಶಿಸಿ ಮಾತನಾಡಿದ್ದರು.
೯. ಜೋಹಾನ್ಸ್‌ಬರ್ಗ್‌ನಲ್ಲಿ ಆಯೋಜಿತವಾದ ಯು.ಎನ್ ವರ್ಲ್ಡ್ ಸಮಿಟ್ ಆನ್ ಸಸ್‌ಟೇನೆಬಲ್ ಡೆವೆಲಪ್‌ಮೆಂಟ್‌ನಲ್ಲಿ ಸಂಸ್ಥೆಯ ಪ್ರತಿನಿಧಿಗಳ ನಾಯಕತ್ವವನ್ನು ದಾದಿಯವರು ವಹಿಸಿಕೊಂಡಿದ್ದರು.
೧೦. ಜಿನಿವಾದಲ್ಲಿ ನಡೆದ ’ದಿ ಗ್ಲೋಬಲ್ ಪೀಸ್ ಇನಿಷಿಯೇಟಿವ್ ಆಫ್ ವುಮೆನ್ ರಿಲಿಜಿಯಸ್ ಅಂಡ್ ಸ್ಪಿರಿಚ್ಯುಯಲ್ ಲೀಡರಸ್’ ಎಂಬ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
೧೧. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ದಿ ವುಮೆನ್ ಆಸ್‌ಫೆಕ್ಟ್ ಆಫ್ ಸೋಶಿಯಲ್ ಇಂಟಿಗ್ರೇಶನ್’ನಲ್ಲಿ ದಾದಿಯವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.
೧೨. ನ್ಯೂಯರ್ಕ್‌ನ ಯು.ಎನ್. ಜನರಲ್ ಅಸೆಂಬ್ಲಿ ಹಾಲ್‌ನಲ್ಲಿ ಮಿಲೇನಿಯಮ್ ವರ್ಲ್ಡ್ ಪೀಸ್ ಸಮಿಟ್ ಆಫ್ ರಿಲಿಜಿಯಸ್ ಅಂಡ್ ಸ್ಪಿರಿಚ್ಯುಯಲ್ ಲೀಡರ‍್ಸ್ ಎಂಬ ಒಂದು ಕಾರ್ಯಕ್ರಮದಲ್ಲಿ ದಾದಿಯವರು ಬ್ರಹ್ಮಾಕುಮಾರೀಸ್‌ನ ನೇತೃತ್ವವನ್ನು ವಹಿಸಿಕೊಂಡು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.
೧೩. ಸ್ಟೇಟ್ ಆಫ್ ವರ್ಲ್ಡ್ ಫೋರಂ, ನ್ಯೂಯಾರ್ಕ್‌ನಲ್ಲಿ ತಮ್ಮ ಭಾಷಣವನ್ನು ಮಾಡಿದ್ದರು.
೧೪. ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸೆಟೆಲ್‌ಮೆಂಟ್-೨ ಎಂಬ ಸಮ್ಮೇಳನದಲ್ಲಿ ದಾದಿಯವರು ತಮ್ಮ ಸಂಸ್ಥೆಯ ನೇತೃತ್ವವನ್ನು ವಹಿಸಿದ್ದರು. ಈ ಸಮ್ಮೇಳನದಲ್ಲಿ ವಿಶ್ವದ ವಿಭಿನ್ನ ಸರ್ಕಾರಗಳಿಗೆ ದಾದಿಯವರು ಮಾನವೋನ್ಮುಖ ವಿಕಾಸ, ಮನುಷ್ಯರ ಪಾತ್ರ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಬಗ್ಗೆ ನಮ್ಮ ಜಾಗೃತಿ ಇತ್ಯಾದಿ ವಿಷಯಗಳ ಮಾಹಿತಿಯನ್ನು ನೀಡಿದ್ದರು.
೧೫. ವಿಶ್ವದ ೬೦ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಮಕ್ಕಳಿಗೆ ಕಲಿಸುತ್ತಿರುವಂತಹ ಲಿವಿಂಗ್ ವ್ಯಾಲ್ಯುಸ್: ಆನ್ ಎಜುಕೇಶನಲ್ ಇನಿಷಿಯೇಟಿವ್‌ನ ಶುಭಾರಂಭವನ್ನು ಮಾಡಿದ್ದಾರೆ. ಯುನಿಸೆಫ್‌ನ ಮೂಲಕ ಶಿಕ್ಷಣತಜ್ಞರೊಂದಿಗೆ ಸೇರಿ ದಾದಿಯವರು ಇದರ ಪ್ರಾರಂಭವನ್ನು ಮಾಡಿದ್ದರು.
೧೬. ಯುನಿಸೆಫ್‌ನ ೫೦ನೇ ವರ್ಷದ ಸಂದರ್ಭದಲ್ಲಿ ಯಂಗ್ ವುಮೆನ್ ಆಫ್ ವಿಸ್‌ಡಮ್ ಎಂಬ ಕಾರ್ಯಕ್ರಮದ ಶುಭಾರಂಭವನ್ನು ಮಾಡಿದರು.
೧೭. ಚೀನಾದ ಬೀಜಿಂಗ್‌ನಲ್ಲಿ ನಡೆದ ಯು.ಎನ್. ಫೋರ್ತ್ ವರ್ಲ್ಡ್ ಕಾನ್‌ಫರೆನ್ಸ್ ಆನ್ ವುಮೆನ್‌ನಲ್ಲಿ ತಮ್ಮ ಸಂಸ್ಥೆಯ ನೇತೃತ್ವವನ್ನು ವಹಿಸಿಕೊಂಡಿದ್ದರು.
೧೮. ದಾದಿಯವರನ್ನು ವಲ್ಡ್ ಕಾಂಗ್ರೆಸ್ ಆಫ್ ಫೇತ್‌ನ ಉಪ-ಸಭಾಪತಿಯನ್ನಾಗಿ ಆರಿಸಲಾಗಿತ್ತು.

ಯಾವುದೇ ಪ್ರಶಸ್ತಿ, ಹೆಸರು-ಕೀರ್ತಿ ಇತ್ಯಾದಿಗಳ ಹಿಂದೆ ಓಡದೇ ನಿಸ್ವಾರ್ಥವಾಗಿ ಸೇವೆಯನ್ನು ಮಾಡುತ್ತಿರುವ ದಾದಿಯವರು ಎಲೆಮರೆಯ ಕಾಯಿಯಾಗಿದ್ದರು. ಆದರೂ ಅನೇಕ ಸಂಘ-ಸಂಸ್ಥೆಗಳು ಗೌರವ-ಪತ್ರವನ್ನು ನೀಡಿ ಸನ್ಮಾನಿಸಿವೆ. ಗೀತಂ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ತಮ್ಮ ಇಳಿ ವಯಸ್ಸಿನಲ್ಲಿಯೂ ವಿಶ್ವದಾದ್ಯಂತ ಸಂಚರಿಸಿ ಆಧ್ಯಾತ್ಮಿಕತೆಯ ಕಂಪನ್ನು ಹರಡಿಸುತಿದ್ದರು. ದಾದಿಯವರಿಂದ ಪ್ರೇರಣೆಯನ್ನು ಪಡೆದಂತಹ ಅನೇಕ ದೇಶ-ವಿದೇಶದ ಸಹೋದರ-ಸಹೋದರಿಯರು ಅವರ ನುಡಿಮುತ್ತುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕವೂ ಪಸರಿಸುತ್ತಿದ್ದಾರೆ.

-ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ