ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಎಲ್ಲ ವರ್ಗದ ಜನ ಆತಂಕದಲ್ಲಿದ್ದಾರೆ. ದೇಶದ ಬೆನ್ನೆಲುಬು ರೈತನು ಕೂಡ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ಕಷ್ಟ ನಷ್ಟ ಅನುಭವಿಸುವಂತಾಗಿದೆ.
ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಎಂಬಲ್ಲಿ ಕೇರಳದ ಎರ್ನಾಕುಲಂ ಮೂಲದ ಶೈಜು 100 ಎಕರೆ ಜಮೀನನ್ನು ಲೀಸ್‍ಗೆ ಪಡೆದು ಅನಾನಸ್ ಕೃಷಿ ಮಾಡಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಭರ್ಜರಿ ಫಸಲು ಕೂಡ ಬಂದಿತ್ತು. ಆದರೆ ಬೆಳೆ ಕಟಾವಿಗೆ ಬರುವ ಹೊತ್ತಿನಲ್ಲಿ ಲಾಕ್‍ಡೌನ್ ಆದ ಕಾರಣ ಸುಮಾರು 300 ಟನ್ ಅನಾನಸ್ ಬೆಳೆ ಜಮೀನಿನಲ್ಲೇ ಉಳಿಯುವಂತಾಗಿದೆ.
ಎರ್ನಾಕುಲಂ ಮೂಲದ ಕೃಷಿಕ ಶೈಜು, ಅನಾನಸ್ ಬೆಳೆಯುವ ಉದ್ದೇಶದಿಂದ ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂ. ಸಾಲ ಮಾಡಿ ಅನಾನಸ್ ಕೃಷಿ ಮಾಡಿದ್ದರು. ಲಾಕ್‍ಡೌನ್ ಇಲ್ಲದಿದ್ದರೆ ಕೃಷಿಕ ಬೆಳೆದ ಅನಾನಸ್ ಉತ್ತರ ಭಾರತದಲ್ಲಿ ಉತ್ತಮ ಬೆಲೆಗೆ ಮಾರಾಟ ಆಗುತ್ತಿತ್ತು. ಆದರೆ ಲಾಕ್‍ಡೌನ್‍ನಿಂದ ಅನಾನಸ್ ಬೆಳೆ ಹಾಳಾಗುತ್ತಿದೆ. ಹೀಗಾಗಿ ಸರ್ಕಾರ ನೆರವಿಗೆ ಬರುವಂತೆ ಕೃಷಿಕ ಶೈಜು ಮನವಿ ಮಾಡಿದ್ದಾರೆ.