ತಮಿಳುನಾಡಿನಲ್ಲಿ ವಿಜಯ್ ಗೆಲುವು ದಾಖಲಾಗಿದೆ. ಹಿಸ್ಟರಿ ಸೃಷ್ಟಿಯಾಗಿದೆ. ವಿಜಯ್ ಇನ್ನು ಮುಂದೆ ತಮಿಳುನಾಡು ಮುಖ್ಯಮಂತ್ರಿ. ವಿಜಯ್ ಗೆಲ್ಲುತ್ತಿದ್ದಂತೆಯೇ ಕರ್ನಾಟಕದಲ್ಲಿ ಸೃಷ್ಟಿಯಾದ ಸೋಷಿಯಲ್ ಮೀಡಿಯಾ ಸಂಚಲನವೇನು ಗೊತ್ತೇ.. ಉಪೇಂದ್ರರ ಪ್ರಜಾಕೀಯವೂ ಇದನ್ನು ಮಾಡಬಹುದೇ ಎಂಬ ಪ್ರಶ್ನೆ. ಉಪೇಂದ್ರರ ಪ್ರಜಾಕೀಯ ವಿಜಯ್ ಮ್ಯಾಜಿಕ್ ಮಾಡೋಕೆ ಆಗಲ್ಲ. ಇದು ಸತ್ಯ. ಅದಕ್ಕೆ ಕಾರಣಗಳೂ ಇವೆ.
ಮೊದಲನೆಯದು ಉಪೇಂದ್ರ ಜನರ ನಡುವೆ ಹೋಗುವುದಿಲ್ಲ. ಹೋಗುವ ಸೂಚನೆಯೂ ಇಲ್ಲ. ವಿಜಯ್ ಅವರು ಟಿವಿಕೆ ಸ್ಥಾಪನೆ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕುತ್ತಾ ಸುಮ್ಮನೆ ಕೂರಲಿಲ್ಲ. ರಾಜ್ಯವನ್ನು ಸುತ್ತಿದರು. ಜನರೊಂದಿಗೆ ಬೆರೆತರು.
ಆದರೆ ಉಪೇಂದ್ರ ವಿಜಯ್ ಅವರಂತಲ್ಲ. ಬಿಡುವಾದಾಗ ಒಂದು ಪೋಸ್ಟನ್ನೋ.. ವಿಡಿಯೋವನ್ನೋ ಹಾಕುತ್ತಾರೆ. ಜನರೂ ಅಷ್ಟೇ.. ಅವರಿಗೆ ಬಿಡುವಾದಾಗ ವಿಡಿಯೋ ನೋಡಿ, ಪೋಸ್ಟ್ ಓದಿ.. ಒಂದು ಲೈಕು, ಕಮೆಂಟು ಒತ್ತುತ್ತಾರೆ.
ಇನ್ನು ತಮಿಳುನಾಡಿನಲ್ಲಿ 234 ಕ್ಷೇತ್ರಕ್ಕೂ ಟಿವಿಕೆ ಸ್ಪರ್ಧಿಸಿತ್ತು. ಅದರಲ್ಲಿ 2 ಕ್ಷೇತ್ರಗಳಲ್ಲಿ ಸ್ವತಃ ವಿಜಯ್ ನಿಂತಿದ್ದರು. ಇನ್ನು 232 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಬಹುತೇಕರದ್ದು ಹೊಸ ಪರಿಚಯ. ಆಟೋ ಡ್ರೈವರ್, ಮಾಂಸದಂಗಡಿ ಓನರ್, ಡಾಕ್ಟರ್, ಎಂಜಿನಿಯರ್, ಮಾದರಿ ರೈತ, ಸಮಾಜ ಸೇವಕ, ಲಾಯರ್.. ಹೀಗೆ ಎಲ್ಲರೂ ಇದ್ದರು. ಅಭಿಮಾನಿ ಸಂಘದ ನಾಯಕರು, ಅಧ್ಯಕ್ಷರಿಗೂ ಟಿಕೆಟ್ ಕೊಟ್ಟಿದ್ದರು. ಇವರೆಲ್ಲರ ಜೊತೆ ಅಪ್ಪಟ ರಾಜಕಾರಣಿಗಳಿಗೂ ಟಿಕೆಟ್ ನೀಡಲಾಗಿತ್ತು. ಅವರ ಕ್ಷೇತ್ರಗಳಲ್ಲಿ ಸ್ವತಃ ವಿಜಯ್ ಹೋಗಿ ಪ್ರಚಾರ ಮಾಡಿದ್ದರು. ಗೆಲ್ಲಿಸಿಕೊಂಡು ಬಂದಿದ್ದರು.
ಟಿವಿಕೆಗೆ ವೋಟು ಹಾಕಿದ ಬಹುತೇಕರಿಗೆ ತಮ್ಮ ಅಭ್ಯರ್ಥಿ ಯಾರು, ಅವರ ವಿದ್ಯಾಭ್ಯಾಸ, ಹಿನ್ನೆಲೆ ಗೊತ್ತಿರಲಿಲ್ಲ. ಅವರು ನಂಬಿದ್ದು ಈ ಅಭ್ಯರ್ಥಿಯನ್ನು ʻನಮ್ಮ ವಿಜಯ್ʼ ನಂಬಿದ್ದಾರೆ ಎಂಬ ನಂಬಿಕೆಯನ್ನೇ.
ಆದರೆ ಉಪೇಂದ್ರ ಹಾಗಲ್ಲ. ಸ್ವತಃ ಅವರೇ ತಮ್ಮ ಪಕ್ಷದ ಅಭ್ಯರ್ಥಿ ಯಾರು, ಆತನಿಗೆ ತಾನೇಕೆ ಟಿಕೆಟ್ ಕೊಟ್ಟೆ ಎನ್ನುವುದನ್ನೂ ಹೇಳುವುದಿಲ್ಲ. ಪ್ರಚಾರದ ಮಾತಂತು ದೂರ. ತಮ್ಮ ಪಕ್ಷದ ಅಭ್ಯರ್ಥಿ ನಿಂತಿರುವ ಕ್ಷೇತ್ರಕ್ಕೆ ಹೆಜ್ಜೆಯನ್ನೂ ಇಡಲ್ಲ. ಆದರೆ ಜನ ಬದಲಾಗಬೇಕಂತೆ.
ಸಿನಿಮಾದಲ್ಲಿ ನನಗೂ ಚಾನ್ಸ್ ಕೊಡಿ ಎಂದವರಿಗೆಲ್ಲ ನಿರ್ಮಾಪಕರು ದುಡ್ಡು ಹಾಕಲ್ಲ. ನಟ, ನಟಿ, ನಿರ್ದೇಶಕ ಯಾರೇ ಇರಲಿ.. ಅವರು ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಬೇಕು. ಉಪೇಂದ್ರ ಆರಂಭದ ದಿನಗಳಲ್ಲಿ ಮಾಡಿದ್ದು ಅದನ್ನೇ ಅಲ್ಲವೇ.
ಆದರೆ ರಾಜಕೀಯದಲ್ಲಿ ಮಾತ್ರ ಇದಾವುದನ್ನೂ ಮಾಡದೆ ಜನ ಬದಲಾಗಲಿ ಎಂದು ಪುಂಗಿ ಊದಿದರೆ ಜನ ನಂಬುವುದು ಹೇಗೆ. ಇದೀಗ ಮತ್ತೆ ಉಪೇಂದ್ರರನ್ನು ಮಾಧ್ಯಮಗಳು ಮಾತನಾಡಿಸುತ್ತಿವೆ. ಅದಕ್ಕೆ ಕಾರಣ ವಿಜಯ್ ಮಾಡಿರುವ ಕ್ರಾಂತಿಯೇ ಹೊರತು, ಉಪೇಂದ್ರ ಮಾಡಿರುವುದು ಏನೇನೂ ಇಲ್ಲ.
ತಾವು ಮಾಡುವ ಸಿನಿಮಾವನ್ನು ಜನ ನೋಡಲಿ ಎಂದು ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರ ಮಾಡುತ್ತಾರೆ. ಉಪೇಂದ್ರ ಅವರೂ ಮಾಡ್ತಾರೆ. ತಾನು ಸಿನಿಮಾ ಮಾಡಿದ್ದೇನೆ, ಜನ ಬಂದು ನೋಡಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್/ವಿಡಿಯೋ ಹಾಕಿ ಮನೆಯಲ್ಲಿ ಕೂರಲ್ಲ. ಈವೆಂಟ್ ಮಾಡ್ತಾರೆ. ಪತ್ರಿಕೆ, ಟಿವಿ ಜಾಹೀರಾತು ಕೊಡ್ತಾರೆ. ಥಿಯೇಟರಿಗೆ ವಿಸಿಟ್ ಹಾಕ್ತಾರೆ.
ಒಂದು ಸಿನಿಮಾಗೇ ಇಷ್ಟೆಲ್ಲ ಮಾಡುವವರು ಲಕ್ಷ ಲಕ್ಷ ವೋಟಿಗಾಗಿ ಏನನ್ನೂ ಮಾಡಲ್ಲ. ವಿಡಿಯೋ ಹಾಕ್ತಾನೆ. ಸೋಷಿಯಲ್ ಮೀಡಿಯಾ ಪ್ರಚಾರ ಮಾಡ್ತೇನೆ ಎಂದರೆ ಜನ ವೋಟ್ ಹಾಕೋದು ಹೇಗೆ. ಅಮ್ಮಮ್ಮಾ ಎಂದರೆ ಲೈಕು ಸಿಗಬಹುದು. ಕಮೆಂಟ್ ಬರಬಹುದು. ವೋಟುಗಳಂತೂ ಖಂಡಿತಾ ಬರಲ್ಲ. ಇದು ವಾಸ್ತವ. ಇದೇ ವಾಸ್ತವ.
Laxmi News 24×7