ಮಂಗಳೂರು: ಕೊರೊನಾದಿಂದ ಗುಣಮುಖರಾದ ಮಂಗಳೂರಿನ ವ್ಯಕ್ತಿಯೊಬ್ಬರು ಕಣ್ಣೀರಿನ ಮೂಲಕ ತಮ್ಮ ಜೀವ ಉಳಿಸಿದ ವಾರಿಯರ್ಸ್ ಗೆ ಧನ್ಯವಾದ ಸಲ್ಲಿಸಿದ್ದಾರೆ.
ಆಸ್ಪತ್ರೆಯಿಂದ ಮನೆಗೆ ಬಂದ ವ್ಯಕ್ತಿಯನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಚಪ್ಪಾಳೆ ಮೂಲಕ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ವ್ಯಕ್ತಿ, ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ಅತ್ಯಂತ ಚೆನ್ನಾಗಿ ನೋಡಿಕೊಂಡರು. ಕುಡಿಯಲು ತಣ್ಣೀರು ಬೇಕಾ ಅಥವಾ ಬಿಸಿ ನೀರು ಬೇಕಾ ಎಂದು ಕೇಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಎಷ್ಟು ಕಷ್ಟಪಡುತ್ತಾರೆ ಎಂಬುವುದು ನಮಗೆ ಗೊತ್ತು. ನಮ್ಮ ಜೀವವನ್ನು ಉಳಿಸಲು ಡಾಕ್ಟರ್ ಹಾಗೂ ನರ್ಸ್ ಗಳು ಕಷ್ಟಪಡ್ತಿರೋದನ್ನು ನೋಡಿ ಕಣ್ಣೀರು ಬಂತು ಎಂದರು.
ಸಾವನ್ನಪ್ಪಿದ ಬಳಿಕ ನಮಗೆ ಸ್ವರ್ಗ ಪ್ರಾಪ್ತಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ನಿಜವಾಗಿಯೂ ಕೊರೊನಾ ವಾರಿಯರ್ಸ್ ಗೌರವ ನೀಡದವರು ನರಕಕ್ಕೆ ಹೋಗಬೇಕು. ಬೇರೆಯವರ ಜೀವ ಉಳಿಸುವವರಿಗೆ ಸ್ವರ್ಗವೇ ಸಿಗುತ್ತೆ. ಹಾಗಾಗಿ ನಾವೆಲ್ಲರೂ ನಮ್ಮವರಿಗಾಗಿ ಹೋರಾಡುತ್ತಿರುವ ಪೊಲೀಸರು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಗೌರವಿಸೋಣ ಮತ್ತು ಸಹಕರಿಸೋಣ ಎಂದು ಗುಣಮುಖರಾದ ವ್ಯಕ್ತಿ ಭಾವುಕರಾದರು.