; ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದ್ದು, ಏರ್ ಪೋರ್ಟ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವಿಮಾನ ನಿಲ್ದಾಣದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಲ್ಯಾಪ್ ಟಾಪ್ ಬ್ಯಾಗ್ ಒಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪತ್ತೆಯಾಗಿತ್ತು. ಈ ಬ್ಯಾಗ್ ನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಅದರಲ್ಲಿ ಸಜೀವ ಬಾಂಬ್ ಇರುವುದು ಗೊತ್ತಾಗಿದೆ. ತಕ್ಷಣ ಬ್ಯಾಗ್ ನ್ನು ವಿಮಾನ ನಿಲ್ದಾಣದ ಹೊರಗೆ ತಂದು ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಆಗಮಿಸಿದ್ದು ಬಾಂಬ್ ನಿಷ್ಕ್ರಿಯ ಕಾರ್ಯದಲ್ಲಿ ತೊಡಗಿದ್ದಾರೆ.
ಆರಂಭದಲ್ಲಿ ಈ ಬ್ಯಾಗ್ ಟಿಕೆಟ್ ಕೌಂಟರ್ ಬಳಿ ವಿವಿಐಪಿಗಳು ಲಗೆಜ್ ಇಡುವ ಜಾಗದಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ. ಬೆಳಿಗ್ಗೆ ಆಟೋದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಈ ಲ್ಯಾಪ್ ಟಾಪ್ ಬ್ಯಾಗ್ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ವಿಮಾನಾ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನಲೆಯಲ್ಲಿ ಮಂಗಳೂರು ಏರ್ ಪೋರ್ಟ್ ನಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣಾವಾಗಿದೆ. ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಿಮಾನ ಹಾರಟದಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಎಲ್ಲಾ ವಾಹನಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, ಭದ್ರತಾ ವೈಫಲ್ಯದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.