Breaking News

ಚುನಾವಣಾ ಆಯೋಗದಲ್ಲಿ ಯಾಕೆ ಭಿನ್ನಾಭಿಪ್ರಾಯ ಬಂದಿದೆ ಅಂತ ಆಯೋಗವೇ ಸ್ಪಷ್ಟಪಡಿಸಲಿ: ಹೆಚ್‌ಡಿಕೆ

Spread the love

ಬೆಂಗಳೂರು: ಚುನಾವಣಾ ಆಯೋಗದಲ್ಲಿ ಯಾಕೆ ಭಿನ್ನಾಭಿಪ್ರಾಯ ಬಂದಿದೆ ಅಂತ ಆಯೋಗವೇ ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ  ಹೇಳಿದ್ದಾರೆ.

ಚುನಾವಣಾ ಆಯೋಗದಲ್ಲಿ ಭಿನ್ನಾಭಿಪ್ರಾಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದು ಅವರಿಗೆ ಸೇರಿದ ಭಿನ್ನಾಭಿಪ್ರಾಯ. ಆ ಮೂವರಲ್ಲಿ ಯಾಕೆ ಈ ವಾತಾವರಣ ಬಂದಿದೆ ಅಂತ ತಿಳಿಸಲಿ. ಆ ಮೂಲಕ ಅವರು ಮೂವರೂ ಸಂಸ್ಥೆಯ ಗೌರವ ಕಾಪಾಡಲಿ ಎಂದರು.

ಕಾಂಗ್ರೆಸ್‌ನವರು ಯಾವ ಪುರುಷಾರ್ಥಕ್ಕೆ ಹೋರಾಟ ಮಾಡುತ್ತಿದ್ದಾರೆ? ಅವರ ನಡವಳಿಕೆ ಯಾವ ರೀತಿ ಇದೆ ಅಂತ ನೋಡಿಕೊಳ್ಳಲಿ. ಚುನಾವಣಾ ಆಯೋಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಒಂದು ಜವಾಬ್ದಾರಿಯುತ ಸಂಸ್ಥೆ. ಪ್ರಜಾಪ್ರಭುತ್ವ ಚುನಾವಣಾ ಆಯೋಗದ ಜವಾಬ್ದಾರಿಯಿಂದಲೇ ಇಷ್ಟು ವರ್ಷ ಉಳಿದುಕೊಂಡು ಬಂದಿದೆ. ಚುನಾವಣಾ ಆಯುಕ್ತರ ಭಿನ್ನಾಭಿಪ್ರಾಯ, ಪತ್ರ ವಿಚಾರ ತೆಗೆದುಕೊಂಡು ಅದೇ ಒಂದು ದೊಡ್ಡ ಅಪರಾಧ ಎಂಬಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಇವರಿದ್ದಾಗ ಏನೇನು ಮಾಡಿದ್ದಾರೆ ಅನ್ನೋದು ಗೊತ್ತಿದೆ, ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಕಿಡಿಕಾರಿದರು.

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಕಾಕ್ರೋಚ್ ಪಕ್ಷದಿಂದ ಗಡುವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಜೆನ್ ಝೀಗಳಿಗೆ ಹೇಳುತ್ತೇನೆ, ಅವರು ಮೊದಲು ಕರ್ನಾಟಕಕ್ಕೆ ಬರಲಿ. ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ನಡೆದಿದೆಯಲ್ಲ, ಅದರ ವಿರುದ್ಧ ಹೋರಾಟ ಮಾಡಲಿ ಎಂದು ಕಾಕ್ರೋಚ್ ಪಕ್ಷದ ನಾಯಕರಿಗೆ ಆಹ್ವಾನ ನೀಡಿದರು. ಕೆಪಿಎಸ್‌ಸಿಯಲ್ಲಿ ಖದೀಮರು, ದರೋಡೆಕೋರರು ಸೇರಿಕೊಂಡಿದ್ದಾರೆ ಅಂತ ಸಿಎಂ ಹೇಳಿದ್ರಲ್ಲ, ಅದಕ್ಕೆ ಕಾರಣ ಯಾರು? ಕೆಪಿಎಸ್‌ಸಿ ಸಂಸ್ಥೆ ಕೆಟ್ಟಿಲ್ಲ, ಅಲ್ಲಿಗೆ ಅಧ್ಯಕ್ಷರು, ಸದಸ್ಯರಾಗಿ ಸರಿಯಾಗಿ ಇರೋರನ್ನು ನೇಮಿಸಿಲ್ಲ. ಆ ಖದೀಮರನ್ನು ನೇಮಕ ಮಾಡಿರುವುದು ಸರ್ಕಾರ. ನೀಟ್ ಪ್ರಶ್ನೆಪತ್ರಿಕೆ ಲೀಕ್ ಆಗಿ ದೊಡ್ಡ ಅನಾಹುತ ಆಗಿದೆ ಅಂತ ಜೆನ್ ಝೀಗಳು ಹೋರಾಡಿದರು. ಇಲ್ಲಿ ಕೆಪಿಎಸ್‌ಸಿಯಲ್ಲಿ ಅದಕ್ಕಿಂತಲೂ ದೊಡ್ಡದು ನಡೆದಿದೆ. 76 ಸಾವಿರ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದು ಏನಾಯ್ತು? ಕೆಪಿಎಸ್‌ಸಿಯಲ್ಲಿ ಎಇಇ ನೇಮಕಾತಿ ಯಾವ ರೀತಿ ನಡೆಯಿತು ಅಂತ ಇಲ್ಲಿಯವರೆಗೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ಕೊಟ್ಟಿಲ್ಲ. ಕೆಪಿಎಸ್‌ಸಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಪ್ರಿಯಾಂಕ್ ಖರ್ಗೆ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

ಗ್ಯಾನೇಂದ್ರ ಕುಮಾರ್ ಮೇಲೆ ಇಡಿ ದಾಳಿ ಆಯಿತು. ಆದರೆ ಆತ ಮೂರು ದಿನ ಎಲ್ಲಿ ನಾಪತ್ತೆ ಆಗಿದ್ದ? ಯಾರು ಎಲ್ಲಿಗೆ ಕರೆದುಕೊಂಡು ಹೋಗಿದ್ರು? ನಂತರ ಕರೆದುಕೊಂಡು ಬಂದು ರೆಸಾರ್ಟ್‌ನಲ್ಲಿ ಇಟ್ಟಿದ್ದು ಯಾರು? ಇದಕ್ಕೆಲ್ಲ ಉತ್ತರ ಕೊಟ್ಟಿದ್ದೀರ ಖರ್ಗೆಯವರೇ? ಅಥವಾ ಸರ್ಕಾರ ಉತ್ತರ ಕೊಟ್ಟಿದೆಯಾ? ಸಿಐಡಿ ತನಿಖೆಯಲ್ಲಿ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿಯೇ ಹೈಕೋರ್ಟ್ ಎಸ್‌ಐಟಿ ರಚಿಸಿದೆ. ಸಿಐಡಿ ಸರಿಯಾದ ತನಿಖೆ ಮಾಡಿಸಿದ್ರೆ ಸರ್ಕಾರಕ್ಕೆ ಯಾಕೆ ಭಯ? ಪಾರದರ್ಶಕ ತನಿಖೆ ನಡೆದಿದ್ರೆ ಸರ್ಕಾರಕ್ಕೆ ಯಾಕೆ ಭಯ? ಹೈಕೋರ್ಟ್ ಎಸ್‌ಐಟಿ ಯಾಕೆ ಬೇಡ ಅಂತಿದ್ದೀರಿ? ನೀವು ಹೇಳೋದನ್ನು ಕೇಳೋರು ಬೇಕು ನಿಮಗೆ, ಅದಕ್ಕೇ ಸುಪ್ರೀಂ ಕೋರ್ಟ್‌ಗೆ ಹೋಗಿ ಅರ್ಜಿ ಹಾಕಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿಗೆ ಬಂದ ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂಬ ಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನ ಆ ದೇವರೇ ಕಾಪಾಡಬೇಕು. ಅಂತಹ ಮುಖ್ಯಮಂತ್ರಿಗಳನ್ನ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರಿಗೆ ಅನ್ನಿಸಿರಬೇಕು. ಕಾಂಗ್ರೆಸ್‌ನವರು ಈ ಹೇಳಿಕೆಗೆ ಪ್ರತಿಭಟನೆ ಮಾಡಬೇಕಿತ್ತು. ಸದನದಲ್ಲಿ ಸಿಎಂ ಆದವರು ಈ ಥರ ಹೇಳಿಕೆ ಕೊಟ್ಟಿದ್ದಾರಲ್ಲ, ಅದರ ಬಗ್ಗೆ ಅವರನ್ನೇ ಕೇಳಬೇಕು. ಅವರ ಹೇಳಿಕೆ ವಿರುದ್ಧ 224 ಜನ ಶಾಸಕರೂ ಪ್ರತಿಭಟನೆ ಮಾಡಬೇಕಿತ್ತು ಎಂದು ಹರಿಹಾಯ್ದರು.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ