ಬೆಂಗಳೂರು: ಬೆಳ್ಳಂಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಮಾಡಿ ಯುವಕನೊಬ್ಬ ಸಿಕ್ಕಿಬಿದ್ದಿರುವ ಘಟನೆ ಹೆಚ್.ಎಸ್.ಆರ್ ಬಡಾವಣೆಯ ಅರಗ ಕೆರೆ ಬಳಿ ನಡೆದಿದೆ.
ಸರ್ಜಾಪುರದಲ್ಲಿ ವಾಸವಿರುವ ಗೋಲ್ಡನ್ ಕುಮಾರ್ ಎಂಬಾತ ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಕದ್ದು ಮುಚ್ಚಿ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಯುವಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಅರಗ ಕೆರೆ ಬಳಿ ಎಂದಿನಂತೆ ಮಹಿಳೆಯೊಬ್ಬರು ಜಾಗಿಂಗ್‌ಗೆ ಬಂದಿದ್ದರು. ಈ ವೇಳೆ ಯುವಕ ಆಕೆಯ ವಿಡಿಯೋ ರೆಕಾರ್ಡ್ ಮಾಡುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಮಹಿಳೆ ಕೋಪಗೊಂಡು ಯುವಕನ ಕೃತ್ಯದ ಬಗೆಗ ಅಲ್ಲೇ ಇದ್ದ ಸ್ಥಳೀಯರಿಗೆ ವಿಚಾರ ತಿಳಿಸಿದ್ದಾಳೆ. ನಂತರ ಆತನ ಮೊಬೈಲ್ ಪರಿಶೀಲಿಸಿದಾಗ ಹಲವು ಮಹಿಳೆಯರ ವಿಡಿಯೋಗಳು ಇರುವುದು ಬೆಳಕಿಗೆ ಬಂದಿದೆ.
ಯುವಕನ ಕೃತ್ಯಕ್ಕೆ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಯುವಕನ ವಿರುದ್ಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7