ಮಂಡ್ಯ: ಕೆಆರ್ಎಸ್ ಜಲಾಶಯದಿಂದ ಹೊರಹರಿವಿನ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದ್ದು, ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಆರ್ಎಸ್ ಡ್ಯಾಂನಿಂದ ನೀರು ಹರಿಸಲಾಗುತ್ತಿದೆ. ಇತ್ತ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಕುಸಿದ ಪರಿಣಾಮ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ.
ಎರಡು ದಿನಗಳ ಹಿಂದೆ 7,697 ಕ್ಯೂಸೆಕ್ ಇದ್ದ ಹೊರಹರಿವು, ನಿನ್ನೆ 8,544 ಕ್ಯೂಸೆಕ್ಗೆ ಹೆಚ್ಚಳವಾಗಿತ್ತು. ಇಂದು ಹೊರಹರಿವಿನ ಪ್ರಮಾಣ ಬರೋಬ್ಬರಿ 9,253 ಕ್ಯೂಸೆಕ್ಗೆ ಏರಿಕೆಯಾಗಿದೆ.
ಜಲಾನಯನ ಪ್ರದೇಶಗಳಲ್ಲಿ ಮಳೆ ತಗ್ಗಿದ ಹಿನ್ನೆಲೆಯಲ್ಲಿ ಡ್ಯಾಂಗೆ ನೀರಿನ ಒಳಹರಿವು ತೀವ್ರವಾಗಿ ಕುಂಠಿತಗೊಂಡಿದ್ದು, ಪ್ರಸ್ತುತ ಕೇವಲ 3,028 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಒಳಹರಿವಿಗಿಂತ 3 ಪಟ್ಟು ಅಧಿಕ ನೀರನ್ನು ಹೊರಬಿಡುತ್ತಿರುವುದರಿಂದ, ಇತ್ತೀಚೆಗಷ್ಟೇ 111 ಅಡಿಗೆ ತಲುಪಿದ್ದ ಡ್ಯಾಂ ಮಟ್ಟವೀಗ 108.76 ಅಡಿಗೆ ಕುಸಿದಿದೆ.
ಸದ್ಯ 30.493 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಒಳಹರಿವು ಇಳಿಕೆಯಾಗುತ್ತಿದ್ದರೂ ಹೊರಹರಿವನ್ನು ನಿರಂತರವಾಗಿ ಹೆಚ್ಚಿಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
Laxmi News 24×7