ಬೆಂಗಳೂರು, ಮಾ.24- ಮನೆಯಲ್ಲೇ ಇದ್ದು ಹಬ್ಬ ಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಂಬರದ ಆಚರಣೆಗಾಗಿ ಕಾನೂನು ಉಲ್ಲಂಘನೆ ಮಾಡಬೇಡಿ. ಇದರಿಂದ ಕೊರೊನಾ ಹರಡುವ ಸಂಭವ ಹೆಚ್ಚಾಗಿದೆ ಎಂದು ಹೇಳಿದರು.
ರಾಜ್ಯಸರ್ಕಾರ, ಆರೋಗ್ಯ ಇಲಾಖೆ, ಪೊಲೀಸರು ಹಗಲು-ರಾತ್ರಿ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಒಟ್ಟು ಸೋಂಕಿನ ಪ್ರಮಾಣ ರಾಜ್ಯದಲ್ಲಿ 37 ಆಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮಾಹಿತಿ ತಲುಪಿದೆ. ನಮ್ಮ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ವೆಂಟಿಲೇಷನ್, ಮಾಸ್ಕ್ ಸೇರಿದಂತೆ ಅಗತ್ಯ ಸಲಕರಣೆಗಳ ಖರೀದಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.