ನವದೆಹಲಿ, ಮಾ.24- ಈಗಾಗಲೇ 16,500ಕ್ಕೂ ಹೆಚ್ಚು ಮಂದಿ ಬಲಿಯಾಗಿ 3.78 ಲಕ್ಷ ಜನರು ಬಾಧಿತವಾಗಿರುವ ಮಾರಕ ಕೊರೊನಾ ವೈರಸ್ ದಾಳಿಗೆ ವಿಶ್ವವೇ ಕಂಗೆಟ್ಟು ಆತಂಕ ಮತ್ತು ಭಯ-ಭೀತಿ ವಾತಾವರಣ ನೆಲೆಸಿರುವಾಗಲೇ ತುಸು ಸಮಾಧಾನಕರ ಸುದ್ದಿಯೊಂದು ಆಶಾಭಾವನೆ ಮೂಡಿಸಿದೆ.
ಕೋವಿಡ್-19 ಸೋಂಕು ಪೀಡಿತರಾಗಿದ್ದವರಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲಿ ಅನೇಕರು ಸಂಪೂರ್ಣ ಗುಣಮುಖರಾಗಿದ್ದಾರೆ.
ಕೊರೊನಾ ವೈರಸ್‍ನ ಕೇಂದ್ರ ಬಿಂದುವಾದ ಚೀನಾದಲ್ಲಿ ಸುಮಾರು 60.000 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೆ, ವಿಶ್ವದ ವಿವಿಧ ದೇಶಗಳಲ್ಲಿ 40,000ಕ್ಕೂ ಹಚ್ಚು ಜನರು ಚೇತರಿಸಿಕೊಂಡಿದ್ಧಾರೆ.
ಇವರಲ್ಲಿ ಅನೇಕರು ಸಂಪೂರ್ಣ ಗುಣಮುಖರಾಗಿರುವುದು ಸಂಸದ ಸಂಗತಿಯಾಗಿದೆ. ಚೀನಾದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿರುವುದು ಕೂಡ ಆಶಾದಾಯಕ ಬೆಳವಣಿಗೆಯಾಗಿದೆ. ಏಷ್ಯಾದ ಕೆಲವು ದೇಶಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆಯಾದರೂ, ಇಟಲಿ, ಅಮೆರಿಕ ಮತ್ತು ಸ್ಪೇನ್ ದೇಶಗಳಷ್ಟು ಆತಂಕಕಾರಿಯಾಗಿಲ್ಲ.
ಭಾರತದಲ್ಲಿ ಈವರೆಗೆ 38 ಮಂದಿ ಕೊರೊನಾ ರೋಗದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಕೇರಳದಲ್ಲಿ ಮೂವರಿಗೆ ಯಾವುದೇ ಚಿಕಿತ್ಸೆ ಇಲ್ಲದೇ ಸೋಂಕು ನಿವಾರಣೆಯಾಗಿದೆ.