ಸಿಎಂ ಯಡಿಯೂರಪ್ಪ ಸಂಪುಟ ಸಂಪುಟ ವಿಸ್ತರಣೆಗೆ ಗುರುವಾರ ಸಮಯ ನಿಗದಿ ಮಾಡಿದ್ದಾರೆ. ಈಗಾಗಲೇ ಯಾರು ಮಂತ್ರಿ ಅಂತಾನೂ ಬಹುತೇಕ ಫೈನಲ್ ಆಗಿದೆ. ಹೆಸರು ಫೈನಲ್ ಆಗಿರೋ ಅರ್ಹ ಶಾಸಕರು ಮುಂದಿನ ರಾಜಕೀಯ ಜೀವನ ಒಳ್ಳೆಯದು ಮಾಡಪ್ಪ ಅಂತ ಬೇಡಿಕೊಳ್ಳಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗ್ತಿದ್ದಾರೆ.
ಗೆದ್ದ 11 ಶಾಸಕರ ಪೈಕಿ 10 ಜನರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಗುರುವಾರ ಸಂಪುಟ ಸೇರ್ಪಡೆ ಆಗೋಕು ಮುಂಚೆ ಸಾಹುಕಾರ್ ಟೀಂ ತಿರುಪತಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಇಂದು ಸಂಜೆ ಅರ್ಹ 7-8 ಶಾಸಕರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಲಿದ್ದಾರೆ. ಸಾಹುಕಾರ್ ರಮೇಶ್ ಜಾರಕಿಹೋಳಿ ನೇತೃತ್ವದಲ್ಲಿ ತಿರುಪತಿಗೆ ತೆರಳಲು ಸಿದ್ಧ ಮಾಡಿಕೊಂಡಿರೋ ತಂಡ ಇಂದು ಒಂದೇ ಬಸ್ ಮೂಲಕ ತಿರುಪತಿಗೆ ತೆರಳಲು ಸಿದ್ಧವಾಗಿದ್ದಾರೆ.
ಅರ್ಹ ಶಾಸಕ ಪೈಕಿ ಶ್ರೀಮಂತ ಪಾಟೀಲ್, ಸೋಮಶೇಖರ್, ಬೈರತಿ ಬಸವರಾಜ್ ಮಾತ್ರ ತಿರುಪತಿಗೆ ತೆರಳದೇ ಇರಲು ನಿರ್ಧಾರ ಮಾಡಿದ್ದಾರೆ. ಉಳಿದ ಶಾಸಕರು ದೇವರ ಮೊರೆ ಹೋಗಿ ವಿಘ್ನ ನಿವಾರಣೆ ಮಾಡುವಂತೆ ಪ್ರಾರ್ಥನೆ ಮಾಡಿಕೊಳ್ಳಲಿದ್ದಾರೆ. ಇಂದು ಸಂಜೆ ತಿರುಪತಿಗೆ ತೆರಳಿ ನಾಳೆ ದರ್ಶನ ಮುಗಿಸಿಕೊಂಡು ನಾಳೆ ಸಂಜೆಯೇ ಬೆಂಗಳೂರಿಗೆ ವಾಪಸ್ ಆಗೋ ಸಾಧ್ಯತೆ ಇದೆ ಅಂತ ಆರ್ಹ ಶಾಸಕರ ಆಪ್ತ ಮೂಲಗಳು ತಿಳಿಸಿವೆ.
ಸಚಿವ ಸ್ಥಾನ ವಂಚಿತರಾಗಿರೋ ಮಹೇಶ್ ಕುಮಟಳ್ಳಿ ತಿರುಪತಿಗೆ ಹೋಗೋ ಸಾಧ್ಯತೆ ಕಡಿಮೆ. ಆದರೆ ರಮೇಶ್ ಜಾರಕಿಹೋಳಿ ಮನವೊಲಿಸಿದರೆ ಅವರು ಇಂದು ತಿರುಪತಿಗೆ ತೆರಳೋ ಸಾಧ್ಯತೆ ಇದೆ.