ಕೊರೊನಾ ವೈರಸ್ ಹರಡುವಿಕೆಯ ಮುನ್ನೆಚ್ಚರಿಕೆಯ ಕ್ರಮವಾಗಿ 100 ಜನರಿಗಿಂತ ಹೆಚ್ಚು ಸೇರುವ ವಿವಾಹಗಳನ್ನು ಮುಂದೂಡುವಂತೆ ಆದೇಶಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಂದು ಬೆಳಗಾವಿಯಲ್ಲಿ ಭವ್ಯ ವಿವಾಹದಲ್ಲಿ ಭಾಗಿಯಾಗಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಉದ್ಯಮ್ ಬಾಗ್ ಕೈಗಾರಿಕಾ ಪ್ರದೇಶದ ಶಗುನ್ ಗಾರ್ಡ್‌ನ್ಸ್‌ನಲ್ಲಿ ನಡೆದ ಬಿಜೆಪಿ ಎಂಎಲ್‌ಸಿ ಮಹಾಂತೇಶ್ ಕವತಗಿಮಠ್‌ರವರ ಮಗಳ ಮದುವೆಯಲ್ಲಿ ಯಡಿಯೂರಪ್ಪನವರು ಭಾಗವಹಿಸಿದ್ದು ಆ ಮದುವೆಯಲ್ಲಿ ಸುಮಾರು 3000ಕ್ಕಿಂತ ಹೆಚ್ಚಿನ ಜನ ಭಾಗವಹಿಸಿದ್ದರು ಎನ್ನಲಾಗಿದೆ.
ಶಾಲಾ ಕಾಲೇಜುಗಳಿಗೆ ರಜೆ ಸೇರಿದಂತೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ಆದೇಶಿಸಿದ್ದ ಯಡಿಯೂರಪ್ಪನವರೇ ಆ ಮದುವೆಯನ್ನು ಮುಂದೂಡುವಂತೆ ಸಲಹೆ ಕೊಡುವುದನ್ನು ಬಿಟ್ಟು ಅದರಲ್ಲಿ ಪಾಲ್ಗೊಂಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ನೂರಾರು ಕಾರುಗಳ ನಿಂತಿದ್ದ ಮದುವೆಯ ಹೊರಾಂಗಣದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಎರಡು ದೊಡ್ಡ ಬ್ಯಾನರ್‌ಗಳನ್ನು ಹಾಕಿದ್ದು ಕೂಡ ಹಾಸ್ಯಸ್ಪದವೆನಿಸಿದೆ.
ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ, ರಾಜ್ಯ ಸಚಿವರಾದ ಶ್ರೀಮಂತ ಪಾಟೀಲ್, ಶಾಸಕರಾದ ಮಹೇಶ್ ಕುಮಟಳ್ಳಿ ಸೇರಿದಂತೆ ಕಾಂಗ್ರೆಸ್ ಜೆಡಿಎಸ್‌ನ ಹಲವು ಮುಖಂಡರು ಸಹ ಮದುವೆಯಲ್ಲಿ ಭಾಗವಹಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಬೆಳಿಗ್ಗೆ 11 ಗಂಟೆಗೆ ವಿವಾಹ ನಡೆಯುವ ಜಾಗಕ್ಕೆ ಆಗಮಿಸಿ ಒಂದು ಗಂಟೆಗಳ ಕಾಲ ಇದ್ದು ವಧು ವರರಿಗೆ ಶುಭ ಹಾರೈಸಿ ವಾಪಸ್ ತೆರಳಿದ್ದಾರೆ.