Home / ರಾಜ್ಯ / ಬೆಳಗಾವಿ ಉಪ ಚುನಾವಣೆ: ಗೆಲುವಿನ ಅಂತರ ಕಡಿಮೆ; ಕಾರಣಗಳೇನು?

ಬೆಳಗಾವಿ ಉಪ ಚುನಾವಣೆ: ಗೆಲುವಿನ ಅಂತರ ಕಡಿಮೆ; ಕಾರಣಗಳೇನು?

Spread the love

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು 5,240 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಅವರು ತಮ್ಮ ಪತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಏ.17ರಂದು ಮತದಾನ ನಡೆದಿತ್ತು. ಮತ ಎಣಿಕೆಯು ಇಲ್ಲಿನ ಆರ್.ಪಿ.ಡಿ. ಕಾಲೇಜಿನಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಜರುಗಿತು. ವಿಜೇತ ಅಭ್ಯರ್ಥಿ ಮಂಗಲಾ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರಿಂದ ಪ್ರಮಾಣಪತ್ರ ಪಡೆದುಕೊಂಡರು.

ಲೋಕಸಭಾ ಉಪ ಚುನಾವಣೆಯ ಸಾಮಾನ್ಯ ವೀಕ್ಷಕ ಚಂದ್ರಭೂಷಣ್ ತ್ರಿಪಾಠಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಂಗಲಾ 4,40,327 ಮತಗಳನ್ನು ಪಡೆದಿದ್ದರೆ, ಸಮೀಪದ ಪ್ರತಿಸ್ಪರ್ಧಿಯಾದ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 4,35,087 ಮತಗಳನ್ನು ಗಳಿಸಿದರು. ಮತ ಎಣಿಕೆಯ ಆರಂಭದಿಂದಲೂ ತೀವ್ರ ಕುತೂಹಲ ಮೂಡಿಸಿತ್ತು. ಕಣದಲ್ಲಿದ್ದ ಹತ್ತು ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿ (ಎಂಇಎಸ್ ಹಾಗೂ ಶಿವಸೇನಾ ಬೆಂಬಲಿತ) ಶುಭಂ ಶೆಳಕೆ 1,17,174 ಮತಗಳನ್ನು ಗಳಿಸಿ 3ನೇ ಸ್ಥಾನ ಗಳಿಸಿದರು.

ಮಂಗಲಾ ಅವರಿಗೆ ಜಯದಲ್ಲಿ ಹೆಚ್ಚು ನೆರವು ಸಿಕ್ಕಿದ್ದು ಗೋಕಾಕ ಮತ್ತು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ. ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲ ತಮ್ಮ ಪಕ್ಷ ನಿಷ್ಠೆ ಮುಂದುವರಿಸಿದರೆ, ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಅನುಪಸ್ಥಿತಿಯಲ್ಲೂ ಜನರು ತಮ್ಮೂರಿನ ಮಗಳ ಪರವಾಗಿ ನಿಂತು ಮುನ್ನಡೆ ದೊರಕಿಸಿಕೊಟ್ಟಿದ್ದಾರೆ. 25ಸಾವಿರಕ್ಕೂ ಹೆಚ್ಚು ಮತಗಳ ಬಾಗಿನ ನೀಡಿದರು. ದಕ್ಷಿಣದಲ್ಲೂ ಅವರಿಗೆ 20ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಿಕ್ಕಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಪೈಕಿ ನಾಲ್ಕರಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿಲ್ಲದಿರುವುದು ಹಲವು ವಿಶ್ಲೇಷಣೆಗೆ ಕಾರಣವಾಗಿದೆ.

ಬಿಜೆಪಿಗೆ ಹೊಡೆತ ಕೊಟ್ಟಿದ್ದೇನು?
* ಅತಿಯಾದ ಆತ್ಮವಿಶ್ವಾಸ
* ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಉಂಟಾಗಿರುವ ಆಕ್ರೋಶ, ಆಡಳಿತ ವಿರೋಧಿ ಅಲೆ
* ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ವ್ಯಕ್ತವಾದ ವಿರೋಧ. ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳು ವಿರುದ್ಧವಾಗಿ ಪ್ರಚಾರ ಮಾಡಿದ್ದು.
* ಎಂಇಎಸ್ ಹಾಗೂ ಶಿವಸೇನಾ ಪ್ರಭಾವದಿಂದ ಮತ ವಿಭಜನೆಯಾದುದು.
* ಪ್ರಚಾರ ಕಾರ್ಯದಲ್ಲಿ ಸಮನ್ವಯ ಪರಿಣಾಮಕಾರಿಯಾಗಿ ಕಂಡುಬರಲಿಲ್ಲ.
* ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು.
* ಕುಟುಂಬ ರಾಜಕಾರಣಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಪಕ್ಷದ ಒಂದು ವರ್ಗದಲ್ಲಿದ್ದ ಅಸಮಾಧಾನ.
* ಉಸ್ತುವಾರಿಯನ್ನು ಹುಬ್ಬಳ್ಳಿಯವರಾದ ಜಗದೀಶ ಶೆಟ್ಟರ್ ಅವರಿಗೆ ನೀಡಲಾಯಿತೆಂಬ ಕಾರಣಕ್ಕೆ ಉಂಟಾಗಿದ್ದ ಅಪಸ್ವರ.
* ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನಾರೋಗ್ಯಕ್ಕೆ ಒಳಗಾದ್ದರಿಂದ ಕೊನೆ ಕ್ಷಣದಲ್ಲಿ ಕೆಲವು ಪ್ರಚಾರ ಸಭೆಗಳನ್ನು ಕೈಬಿಟ್ಟಿದ್ದು.
* ಈ ಭಾಗದ ಪ್ರಭಾವಿ ರಮೇಶ ಜಾರಕಿಹೊಳಿ ಅವರು ಪ್ರಚಾರದಲ್ಲಿ ತೊಡಗಿಕೊಳ್ಳಲು ಆಗದಿರುವುದು.
* ಅರಭಾವಿಯ ಶಾಸಕ, ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಆರಂಭದಿಂದಲೂ ಪ್ರಚಾರ ಮಾಡಲಿಲ್ಲ. ಕೊನೆ ಕ್ಷಣಧಲ್ಲಿ ಕಣಕ್ಕಿಳಿದರು.
* ಅಭ್ಯರ್ಥಿ ಘೋಷಣೆಯಲ್ಲಿ ಆದ ವಿಳಂಬ, ಬಹುತೇಕ ಕಡೆಗಳಿಗೆ ಪ್ರಚಾರಕ್ಕೆ ಹೋಗದಿರುವುದು.

ಕಾಂಗ್ರೆಸ್‌ಗೆ ಮುಳುವಾಗಿದ್ದೇನು?
* ಚುನಾವಣೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸದಿರುವುದು.
* ಅಭ್ಯರ್ಥಿ ಘೋಷಣೆಯಲ್ಲಾದ ವಿಳಂಬ, ಬಹುತೇಕ ಕಡೆಗಳಲ್ಲಿ ಪ್ರಚಾರ ನಡೆಸದಿರುವುದು.
* ಗೋಕಾಕ, ಅರಭಾವಿಯಲ್ಲಿ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪ್ರಚಾರ ನಡೆಸಲು ಅವಕಾಶ ಕೊಡದಿರುವುದು.
* ಶಾಸಕರನ್ನು ಗೆಲ್ಲಿಸಿದರೆ, ಅವರ ಕ್ಷೇತ್ರದಲ್ಲಿ ಮತ್ತೊಂದು ಉಪ ಚುನಾವಣೆಯ ಗೊಡವೆ ಬೇಡವೆಂಬ ಭಾವನೆ.
* ಸಹೋದರರಾದ ರಮೇಶ ಜಾರಕಿಹೊಳಿ, ಲಖನ್ ಜಾರಕಿಹೊಳಿ ಬೆಂಬಲ ಕೊಡದಿರುವುದು.
* ಸಿ.ಡಿ. ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ವಿರುದ್ಧ ಅವಹೇಳನ ಮಾಡಿದ ಪಕ್ಷದ ಅಭ್ಯರ್ಥಿ ಬೆಂಬಲಿಸದಿರಲು ಬೆಂಬಲಿಗರು ಗೋಕಾಕದಲ್ಲಿ ನಡೆಸಿದ ಪ್ರಚಾರ.
* ಏ.14ರಂದೇ ಪ್ರಚಾರ ಸಭೆಗಳನ್ನು ಬಹುತೇಕ ಮುಗಿಸಿದ್ದು.
* ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಕೊನೆ ದಿನ ಪ್ರಚಾರ ಸಭೆಗಳನ್ನೇ ನಡೆಸಲಿಲ್ಲ.
* ನಗರದಲ್ಲಿ ಒಂದೆರಡು ಕಡೆ ಮಾತ್ರವೇ ಪ್ರಚಾರ ಮಾಡಿದ್ದು.
* ವರ್ಚಸ್ಸು, ಅನುಭವಕ್ಕೆ ಮಣೆ ಹಾಕುತ್ತಾರೆಂದು ಭಾವಿಸಿ ವ್ಯಾಪಕ ಪ್ರಚಾರ ಮಾಡದಿರುವುದು.
* ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಾಯಕರೆಲ್ಲರೂ ಪರಿಣಾಮಕಾರಿಯಾಗಿ ಕೆಲಸ ಮಾಡದಿರುವುದು.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ