Breaking News

ಪೋಕ್ಸೋ ಕೇಸಲ್ಲಿ ವಚನಾನಂದ ಶ್ರೀಗೆ ಐದು ಗಂಟೆ ಗ್ರಿಲ್

Spread the love

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸುತ್ತ ಈಗ ಪೋಕ್ಸೋ ಉರುಳು ಬಿಗಿಗೊಂಡಿದೆ. ಇಂದು ಹರಿಹರ ಗ್ರಾಮಾಂತರ ಪೊಲೀಸರು ಶ್ರೀಗಳನ್ನು ಐದು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದಾರೆ.

ಇತ್ತೀಚಿಗೆ ಮಠದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐ ಮಂಜುಳಾ ನೇತೃತ್ವದ ತಂಡ, ಇಂದು ವಚನಾನಂದ ಶ್ರೀಗಳನ್ನು ನಿರಂತರ ಐದು ಗಂಟೆಗಳ ಕಾಲ ಸುದೀರ್ಘ ವಿಚಾರಣೆಗೆ ನಡೆಸಿ, ಮೆಡಿಕಲ್ ಟೆಸ್ಟ್‌ಗೆ ಒಳಪಡಿಸಿದ್ದಾರೆ. ಆದರೆ ಈ ಎಲ್ಲಾ ಹೈಡ್ರಾಮಾದ ನಡುವೆಯೇ ಸ್ವಾಮೀಜಿ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು, ಬಂಧನದಿಂದ ಬಚಾವ್ ಆಗಿದ್ದಾರೆ.

ಮಠದಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ, ಮಕ್ಕಳ ಮೇಲೆ ದೌರ್ಜನ್ಯ, ಮಕ್ಕಳ ಖಾಸಗಿ ಭಾಗ ಮುಟ್ಟಿ ದೌರ್ಜನ್ಯ ಎಂದು ದೂರಿನಲ್ಲಿ ಉಲ್ಲೇಖವಾದ ಇತರ ಆರೋಪಗಳ ಬಗ್ಗೆ ಪ್ರಶ್ನೆ ಕೇಳಿ, ವಿವರವಾದ ವರದಿಯನ್ನು ಲಿಖಿತ ರೂಪದಲ್ಲಿ ಪಿಎಸ್‌ಐ ಮಂಜುಳಾ ನೇತೃತ್ವದ ತಂಡ ದಾಖಲಿಸಿಕೊಂಡಿದೆ. ವಿಚಾರಣೆಗೆ ಮುನ್ನ `ಪಬ್ಲಿಕ್ ಟಿವಿ’ಯ ಜೊತೆ ಮಾತನಾಡಿದ ವಚನಾನಂದ ಸ್ವಾಮೀಜಿ ಎಲ್ಲಾದಕ್ಕೂ ಕಾಲವೇ ಉತ್ತರ ಕೊಡಲಿದೆ. ಸತ್ಯವೇ ಗೆಲ್ಲಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಸುಧೀರ್ಘ 5 ಗಂಟೆಗಳ ಕಾಲ ವಿಚಾರಣೆಯ ಬೆನ್ನಲ್ಲೇ ಪೊಲೀಸರು ಸ್ವಾಮೀಜಿಯನ್ನು ಹರಿಹರ ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ. ಇದರ ನಡುವೆಯೇ ಟ್ರಸ್ಟಿಗಳ ಷಡ್ಯಂತ್ರ ಎಂದು ಸ್ವಾಮೀಜಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಹರಿಹರ ಪಂಚಮಸಾಲಿ ಪೀಠದ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಉಚ್ಚಾಟನೆ ನಂತರ ಲೆಕ್ಕಕೊಡಿ ಅಭಿಯಾನವನ್ನು ಶುರು ಮಾಡಿದ ವಚನಾನಂದ ಸ್ವಾಮೀಜಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಹಾಗೂ ವಿದ್ಯಾರ್ಥಿಗಳನ್ನು ಮಸಾಜ್‌ಗೆ ಬಳಸಿಕೊಳ್ಳುತ್ತಿದ್ದರು ಎಂಬ ಗಂಭೀರ ಆರೋಪ ಶ್ರೀಗಳ ಮೇಲಿದೆ.

ಸಂತ್ರಸ್ತ ಬಾಲಕನ ತಾಯಿ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳ ಹರಿಹರ ಆಗಿದ್ದರಿಂದ ಈ ಕೇಸ್ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದೆ.

ಈ ಪ್ರಕರಣದ ಟ್ವಿಸ್ಟ್ ಅಂದರೆ, ತಮ್ಮ ವಿರುದ್ಧ ಇಂತಹದೊಂದು ದೂರು ದಾಖಲಾಗುವ ಮುನ್ಸೂಚನೆಯನ್ನು ಶ್ರೀಗಳು ಮುಂಚಿತವಾಗಿಯೇ ಅರಿತಿದ್ದರು. ಮಠದ ಟ್ರಸ್ಟಿಗಳು ಮತ್ತು ಅವರ ಬೆಂಬಲಿಗರು ಸೇರಿ ತಮ್ಮ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಿ, ಶ್ರೀಗಳು ಏಪ್ರಿಲ್ 21ರಂದೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ಒಂದನೇ ವಿಶೇಷ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಈಗಾಗಲೇ ವಚನಾನಂದ ಶ್ರೀಗಳಿಗೆ ಮುಂಚಿತವಾಗಿಯೇ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಇನ್ನು ಜಾಮೀನು ನೀಡುವಾಗ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ವ್ಯಾಪ್ತಿ ಪ್ರದೇಶ ಬಿಟ್ಟು ಹೋಗಬಾರದು ಎಂಬ ಕಠಿಣ ಷರತ್ತುಗಳನ್ನು ವಿಧಿಸಿದೆ.


Spread the love

About Laxminews 24x7

Check Also

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್ – ಬಸ್‌ಪಾಸ್ ಶುಲ್ಕ ಮರುಪಾವತಿ; ಜೂ.29 ರಿಂದ ಅರ್ಜಿ ಪ್ರಕ್ರಿಯೆ ಶುರು

Spread the loveವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ? ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಘೋಷಣೆ ಮಾಡಿದ್ದ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ