Home / ರಾಜಕೀಯ / ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನೆ

ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನೆ

Spread the love

ಬೆಂಗಳೂರು: ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಫ‌ಲಿತಾಂಶ ರಾಜ್ಯ ಬಿಜೆಪಿ ನಾಯಕರ ಬೆವರಿಳಿಯುವಂತೆ ಮಾಡಿದೆ. ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯವೂ ಫ‌ಲಿತಾಂಶದ ಮೇಲೆ ಪರಿಣಾಮ ಬೀರಿದಂತಿದೆ.

ಬಸವಕಲ್ಯಾಣ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭೆಯಲ್ಲಿ ನಿರಾಯಾಸ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ಆಡಳಿತ ಪಕ್ಷ ಬಿಜೆಪಿಗೆ ಬೆಳಗಾವಿ ಕ್ಷೇತ್ರದ ಮತ ಎಣಿಕೆಯ ಹಾವು ಏಣಿ ಆಟ ಬಿಜೆಪಿ ನಾಯಕರು ಉಸಿರು ಬಿಗಿ ಹಿಡಿಯುವಂತೆ ಮಾಡಿದ್ದು ಸುಳ್ಳಲ್ಲ.

ಫ‌ಲ ನೀಡದ ಕಾರ್ಯತಂತ್ರ: ಮಸ್ಕಿಯಲ್ಲಿ ಬಿಜೆಪಿ ಗೆಲುವಿಗೆ ಕಸರತ್ತು ನಡೆಸಿದ್ದರೂ, ಅಭ್ಯರ್ಥಿಯ ಬಗ್ಗೆ ಜನರಿಗೆ ಇದ್ದ ತಿರಸ್ಕಾರವನ್ನು ಪಕ್ಷದ ಪರವಾಗಿ ತಿರುಗಿಸಲು ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಅವರಿಂದಲೂ ಸಾಧ್ಯವಾಗದಿರುವುದು ಅವರ ಚುನಾವಣಾ ಕಾರ್ಯತಂತ್ರವೂ ತಲೆ ಕೆಳಗಾಗುವಂತೆ ಮಾಡಿದೆ. ಎರಡು ವಾರ ವಿಜಯೇಂದ್ರ ಮಸ್ಕಿಯಲ್ಲಿಯೇ ಠಿಕಾಣಿ ಹೂಡಿ ಪ್ರತಾಪ್‌ಗೌಡ ಪಾಟೀಲರನ್ನು ಗೆಲ್ಲಿಸಲು ಶ್ರಮಿಸಿದ್ದರು. ಅಭ್ಯರ್ಥಿಯ ಆಯ್ಕೆಯ ಸಂದರ್ಭದಲ್ಲೇ ಮತದಾರರು ಅವರನ್ನು ಸೋಲಿಸಲು ತೀರ್ಮಾನಿಸಿದಂತಿತ್ತು. ಅದು ಬಿಜೆಪಿಯ ನಾಯಕರಿಗೂ ಗೊತ್ತಿದ್ದರೂ, ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲು ಮಾಡಿದ ಕಸರತ್ತಿಗೆ ಬೆಲೆ ತೆತ್ತಂತಿದೆ.

ಸಂಘಟಿತ ಕಾರ್ಯತಂತ್ರದ ಫ‌ಲ: ಬಸವಕಲ್ಯಾಣ ಕ್ಷೇತ್ರದಲ್ಲಿ ಉಸ್ತುವಾರಿಗಳಾಗಿದ್ದ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಸೋಮಣ್ಣ, ಬಸವರಾಜ ಬೊಮ್ಮಾಯಿ ಅವರ ವ್ಯವಸ್ಥಿತ ಕಾರ್ಯತಂತ್ರ ಬಿಜೆಪಿ ಅಭ್ಯರ್ಥಿ ಗೆಲುವಿನ ದಡ ಸೇರಲು ಸಹಕಾರಿಯನ್ನಾಗಿಸಿದಂತಿದೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖೂಬಾ, ಎನ್‌ಸಿಪಿಯಿಂದ ಸ್ಪರ್ಧೆಗೆ ಮುಂದಾಗಿದ್ದ ಮಾರುತಿರಾವ್‌ ಮುಳೆ ಅವರನ್ನೂ ಜಾಣತನದಿಂದ ಹಿಂದೆ ಸರಿಸಿ ಮರಾಠ ಸಮುದಾಯದ ಮತಗಳು ವಿಭಜನೆ ಆಗುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಮಾಲಾ ನಾರಾಯಣ ರಾವ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದು ಕಾಂಗ್ರೆಸ್‌ನ ಸ್ಥಳೀಯ ನಾಯಕರಿಗೆ ಇಷ್ಟ ಇಲ್ಲದಿರುವುದೂ ಬಿಜೆಪಿಗೆ ವರವಾಗಿ ಪರಿಣಮಿಸಿದೆ.

ಬೆಳಗಾವಿಯಲ್ಲಿ ನಿಟ್ಟುಸಿರು ಬಿಟ್ಟ ನಾಯಕರು: ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದರೂ, ವ್ಯವಸ್ಥಿತ ಕಾರ್ಯತಂತ್ರ ರೂಪಿಸದೆ, ಹೇಗೋ ಗೆಲ್ಲುತ್ತೇವೆ ಎನ್ನುವ ನಿರ್ಲಕ್ಷ್ಯ ಧೋರಣೆ ಬಿಜೆಪಿ ನಾಯಕರನ್ನು ಗೆಲುವಿನ ನಗೆ ಬೀರಲು ಕೊನೆವರೆಗೂ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ಘಟಾನುಘಟಿ ನಾಯಕರಿದ್ದರೂ, ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಚುನಾವಣೆ ಉಸ್ತುವಾರಿ ವಹಿಸಿದ್ದು, ಸ್ಥಳೀಯ ಶಾಸಕರು ಹಾಗೂ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದ ಮರಾಠ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಾರೂ ಪ್ರಯತ್ನಿಸದೇ ಇದ್ದಿದ್ದು, ಎಂಇಎಸ್‌ ಅಭ್ಯರ್ಥಿ ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದು ಬಿಜೆಪಿ ನಾಯಕರ ನಿರ್ಲಕ್ಷ್ಯ ಎದ್ದು ಕಾಣುವಂತೆ ಮಾಡಿತು. ಈ ಗೆಲುವು ಬಿಜೆಪಿಗೆ ಸಂಭ್ರಮಕ್ಕಿಂತ ಎಚ್ಚರಿಕೆ ನೀಡಿದಂತಿದೆ.

ಪಂಚಮಸಾಲಿ ನಡೆ ಫ‌ಲಿತಾಂಶದ ಮೇಲೆ ಪರಿಣಾಮ ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಪಂಚಮಸಾಲಿ ಸಮುದಾಯ ಈ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಶಕ್ತಿಯ ಸಂದೇಶ ರವಾನಿಸಿದಂತೆ ಕಾಣಿಸುತ್ತದೆ. ಮತದಾನದ ಕೊನೇ ಘಳಿಗೆವರೆಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇರವಾಗಿ ಬಿಜೆಪಿಗೆ ಮತ ಹಾಕುವಂತೆ ಮನಃಪೂರ್ವಕವಾಗಿ ಸಮುದಾಯದ ಜನರಿಗೆ ಸಂದೇಶ ನೀಡಿದಂತೆ ಕಾಣುವುದಿಲ್ಲ. ಇದೇ ಸಂದರ್ಭದಲ್ಲಿಯೇ ಶರಣು ಶರಣಾರ್ಥಿ ಯಾತ್ರೆ ನಡೆಸಿದ್ದು, ಸಮುದಾಯವನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದರೆ ಫ‌ಲಿತಾಂಶಕ್ಕೆ ಪರದಾಡಬೇಕಾಗುತ್ತದೆಂಬ ಸಂದೇಶ ನೀಡಿದಂತಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ