Home / ರಾಜ್ಯ / ರಾಜ್ಯ ಸರಕಾರದ ಪಾಪದ ಫಲವನ್ನು ಜನತೆ ಅನುಭವಿಸಬೇಕಿದೆ: ಸಾರಿಗೆ ಮುಷ್ಕರದ ಬಗ್ಗೆ ಸಿದ್ದರಾಮಯ್ಯ

ರಾಜ್ಯ ಸರಕಾರದ ಪಾಪದ ಫಲವನ್ನು ಜನತೆ ಅನುಭವಿಸಬೇಕಿದೆ: ಸಾರಿಗೆ ಮುಷ್ಕರದ ಬಗ್ಗೆ ಸಿದ್ದರಾಮಯ್ಯ

Spread the love

ಬೆಂಗಳೂರು: `ರಾಜ್ಯ ಸರಕಾರ ತನ್ನ ಪ್ರತಿಷ್ಠೆಯನ್ನು ಬದಿಗಿಟ್ಟು ತಕ್ಷಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ಸೇರಿದಂತೆ ರಸ್ತೆ ಸಾರಿಗೆ ಸಂಸ್ಥೆಗಳ ಕಾರ್ಮಿಕರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿ, ಸಾರಿಗೆ ವ್ಯವಸ್ಥೆಯಿಲ್ಲದೆ ಕಷ್ಟನಷ್ಟಕ್ಕಿಡಾಗಿರುವ ಜನತೆಯನ್ನು ರಕ್ಷಿಸಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `ಆಂತರಿಕ ತಿಕ್ಕಾಟ, ಅಸಾಮರ್ಥ್ಯ ಮತ್ತು ಭ್ರಷ್ಟಾಚಾರಗಳಿಂದಾಗಿ ಹಾದಿತಪ್ಪಿರುವ ರಾಜ್ಯದ ಬಿಜೆಪಿ ಸರಕಾರದ ಪಾಪದ ಫಲವನ್ನು ಜನತೆ ಅನುಭವಿಸಿದಂತಾಗಿದೆ. ಇದರ ವಿರುದ್ಧ ಸ್ಪಷ್ಟ ಸಂದೇಶವನ್ನು ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ನೀಡಲಿದ್ದಾರೆ’ ಎಂದು ಎಚ್ಚರಿಸಿದ್ದಾರೆ.

`ಕೆಎಸ್‍ಆರ್‍ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಲಾಗದಿರುವುದಕ್ಕೆ ರಾಜ್ಯ ಬಿಜೆಪಿ ಸರಕಾರ ನೀಡುತ್ತಿರುವ ಆರ್ಥಿಕ ಸಂಕಷ್ಟ ಸ್ವಯಂಕೃತ ಅಪರಾಧ. ತನ್ನ ದುರಾಡಳಿತ ಮತ್ತು ಕೇಂದ್ರದ ಗುಲಾಮಗಿರಿಯಿಂದಾಗಿ ರಾಜ್ಯ ಸರಕಾರ ದಿವಾಳಿಯಾಗಿದೆ. ಕಾರ್ಮಿಕ ಸಂಘದ ನಾಯಕರ ಜೊತೆ ಕೂತು ಅವರ ಮನವೊಲಿಸಿ ಸಮಸ್ಯೆಯನ್ನು ಬಗೆಹರಿಸಬೇಕಾದ ರಾಜ್ಯ ಸರಕಾರ ಖಾಸಗಿ ಬಸ್ ಓಡಿಸುವ, `ಎಸ್ಮಾ’ ಜಾರಿಗೊಳಿಸುವ ಬೆದರಿಕೆಯೊಡ್ಡಿ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿರುವುದು ದುರದೃಷ್ಟಕರ’ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

`ಕಳೆದ ಬಾರಿ ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಅವರ ಬೇಡಿಕೆಗಳ ಬಗ್ಗೆ ಸಮ್ಮತಿಸಿದಾಗಲೇ ಅದರ ಪರಿಣಾಮವನ್ನು ರಾಜ್ಯ ಸರಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಆ ಕ್ಷಣದಲ್ಲಿ ಸುಳ್ಳು ಆಶ್ವಾಸನೆ ನೀಡಿ ನಂತರ ಮಾತು ತಪ್ಪಿರುವುದೇ ಈಗಿನ ಸಂಘರ್ಷಕ್ಕೆ ಕಾರಣ. ಕೊರೋನ ರೋಗದಿಂದ ತತ್ತರಿಸಿಹೋಗಿರುವ ರಾಜ್ಯದ ಜನತೆ ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರದಿಂದಾಗಿ ದುಪ್ಪಟ್ಟು ಕಷ್ಟ-ನಷ್ಟಕ್ಕೀಡಾಗುತ್ತಿರುವುದಕ್ಕೆ ರಾಜ್ಯದ ಅಸಮರ್ಥ-ಭ್ರಷ್ಟ ಬಿಜೆಪಿ ಸರಕಾರವೇ ಹೊಣೆಯಾಗಿದೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ