Breaking News

ಒಂದು ಟ್ವೀಟ್ ಮತ್ತು ಟೂಲ್​ಕಿಟ್​ನಿಂದ ಹಲವು ಸಂಗತಿಗಳು ಬಯಲಾಗಲಿವೆ: ವಿದೇಶಾಂಗ ಸಚಿವ

Spread the love

ದೆಹಲಿ: ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಮಾಡಿದ್ದ ಟ್ವೀಟ್​ಗೆ, ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು ಸರಿ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಸ್ವೀಡನ್​ನ ಯುವ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್ ಡಿಲೀಟ್ ಮಾಡಿರುವ ಟ್ವೀಟ್​ನಲ್ಲಿ ಟೂಲ್​ಕಿಟ್ ಡಾಕ್ಯುಮೆಂಟ್ ಹಂಚಿಕೊಂಡಿದ್ದಳು. ಅದಾದ ಬಳಿಕ ದೆಹಲಿ ಪೊಲೀಸರು, ಟೂಲ್​ಕಿಟ್​ಗೆ ಖಲಿಸ್ತಾನಿ ಸಂಬಂಧ ಇರುವುದನ್ನು ಪತ್ತೆಮಾಡಿದ್ದರು.

ಈ ಘಟನೆಗಳು ನಡೆದು ಎರಡು ದಿನಗಳ ಬಳಿಕ (ಫೆ.6) ಮಾತನಾಡಿರುವ ಎಸ್. ಜೈಶಂಕರ್, ಟೂಲ್​ಕಿಟ್ ಡಾಕ್ಯುಮೆಂಟ್ ಹಲವಾರು ಸಂಗತಿಗಳನ್ನು ಬಯಲು ಮಾಡಿದೆ. ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳ ಟ್ವೀಟ್ ವಿಚಾರಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ಯಾಕೆ ಪ್ರತಿಕ್ರಿಯಿಸಿದೆ ಎಂದು ಇದರಿಂದ ಸರಿಯಾಗಿ ತಿಳಿಯಬಹುದು ಎಂದು ಹೇಳಿದ್ದಾರೆ.

ಒಂದು ಟ್ವೀಟ್, ಟೂಲ್​ಕಿಟ್ ಹಲವು ಸಂಗತಿಗಳನ್ನು ಬಯಲು ಮಾಡಿದೆ. ಇನ್ನೂ ಏನೇನು ವಿಚಾರಗಳು ಹೊರಬೀಳಲಿವೆ ಎಂಬ ಬಗ್ಗೆ ನಾವು ಕಾದುನೋಡಬೇಕು. ಸೆಲೆಬ್ರಿಟಿಗಳು ತಮಗೆ ಹೆಚ್ಚು ತಿಳಿದಿರದ ವಿಚಾರವಾಗಿ ಮಾತನಾಡಿದ್ದಾರೆ. ಅವರ ಟ್ವೀಟ್​ಗೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿರುವುದಕ್ಕೆ ಖಚಿತ ಕಾರಣವಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.

ಗುರುವಾರ (ಫೆ. 4) ದೆಹಲಿ ಪೊಲೀಸ್ ಸೈಬರ್ ಕ್ರೈಂ ವಿಭಾಗದವರು, ಟೂಲ್​ಕಿಟ್ ತಯಾರಿಸಿದವರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ದ್ವೇಷ ಹರಡಿರುವ ಬಗ್ಗೆ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. 18 ವರ್ಷದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್, ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಳು. ಅದರಲ್ಲಿ ಟೂಲ್​ಕಿಟ್ ಕೂಡ ಶೇರ್ ಆಗಿತ್ತು. ಬಳಿಕ, ಆ ಟ್ವೀಟ್​ ಅನ್ನು ಗ್ರೆಟಾ ಡಿಲಿಟ್ ಮಾಡಿದ್ದಳು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶೇಷ ಕ್ರೈಂ ಬ್ರಾಂಚ್​ನ ಪ್ರವೀರ್ ರಂಜನ್, ಟೂಲ್​ಕಿಟ್ ರಚನೆಯ ಹಿಂದೆ ಖಲಿಸ್ತಾನಿ ಪರವಾಗಿರುವ ‘ಪೊಯೆಟಿಕ್ ಜಸ್ಟೀಸ್ ಫೌಂಡೇಷನ್’ ಕೈವಾಡ ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ರೈತರ ಪ್ರತಿಭಟನೆಯ ಪರವಾಗಿ ಟ್ವೀಟ್ ಮಾಡಿದ್ದರು. ಪಾಪ್ ತಾರೆ ರಿಹಾನ್ನಾ, ನ್ಯಾಯವಾದಿ-ಬರಹಗಾರ್ತಿ ಮೀನಾ ಹ್ಯಾರಿಸ್, ಗ್ರೆಟಾ ಥನ್​ಬರ್ಗ್ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಬಳಿಕ, ಭಾರತೀಯ ವಿದೇಶಾಂಗ ಸಚಿವಾಲಯ ಈ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿತ್ತು. ಅವರ ಟ್ವೀಟ್​ಗಳನ್ನು ಸ್ಪಷ್ಟವೂ ಅಲ್ಲದ, ಜವಾಬ್ದಾರಿಯುತವಲ್ಲದ ಹೇಳಿಕೆ ಎಂದು ತಿಳಿಸಿತ್ತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ