Breaking News
Home / ರಾಜ್ಯ / ವಿಶ್ವನಾಥ್‌ ನಮ್ಮ ಗುರುಗಳು, ಅವರ ಟೀಕೆ ಅಶೀರ್ವಾದವಿದ್ದಂತೆ‌: ರಮೇಶ ಜಾರಕಿಹೊಳಿ

ವಿಶ್ವನಾಥ್‌ ನಮ್ಮ ಗುರುಗಳು, ಅವರ ಟೀಕೆ ಅಶೀರ್ವಾದವಿದ್ದಂತೆ‌: ರಮೇಶ ಜಾರಕಿಹೊಳಿ

Spread the love

ಹುಬ್ಬಳ್ಳಿ: ವಿಶ್ವನಾಥ್‌ ಅವರು ನಮ್ಮ ಗುರುಗಳು. ಅವರು ಏನೇ ಟೀಕಿಸಿದರೂ, ಅದು ನಮಗೆ ಆಶೀರ್ವಾದವಿದ್ದಂತೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ವಿಶ್ವನಾಥ್‌ ಸಚಿವರಾಗಬೇಕು ಎಂಬುದು ನನ್ನ ಆಸೆ. ಕಾನೂನಿನ ತೊಡಕು ಇರುವ ಕಾರಣ ಸದ್ಯಕ್ಕೆ ಸಾಧ್ಯವಾಗಿಲ್ಲ. ಕಾನೂನು ಅಡಚಣೆ ಪರಿಹಾರವಾದರೆ ಸಚಿವರಾಗುತ್ತಾರೆ. ಇದರ ಬಗ್ಗೆ ಅವರೊಂದಿಗೆ ವೈಯಕ್ತಿಯವಾಗಿ ಚರ್ಚಿಸುತ್ತೇನೆ’ ಎಂದರು.

ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸಿ.ಡಿ. ಕುರಿತು ನೀಡಿದ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಯತ್ನಾಳ ಹಿರಿಯ ನಾಯಕರು, ಅವರ ಬಗ್ಗೆ ಅಪಾರವಾದ ಗೌರವವಿದೆ. ಸಿ.ಡಿ. ಬಗ್ಗೆ ನನಗೇನೂ ಗೊತ್ತಿಲ್ಲ. ಅವರಿಗೂ ಸಚಿವ ಸ್ಥಾನ ಸಿಗಬೇಕಿತ್ತು. ಅವರು ಮಾಧ್ಯಮಗಳ ಎದುರು ಎಲ್ಲವನ್ನೂ ಮಾತನಾಡುವುದನ್ನು ಬಿಟ್ಟು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು’ ಎಂದರು.

ಸಿ.ಪಿ. ಯೋಗೇಶ್ವರ ಮೇಲೆ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರಿಗೆ ವಂಚನೆ ಆರೋಪವಿದೆ; ಆದರೂ ಸಚಿವ ಸ್ಥಾನ ನೀಡಲಾಗಿದೆ ಎಂದು ವಿಶ್ವನಾಥ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ‘ವಂಚನೆ ಬಗ್ಗೆ ನನಗೆ ಗೊತ್ತಿಲ್ಲ. ಏನಾದರೂ ದಾಖಲೆಗಳಿದ್ದರೆ ವಿಶ್ವನಾಥ್ ಅವರು ಕೊಡಲಿ. ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು.

ವಿವಿಧ ಇಲಾಖೆಗಳಲ್ಲಿ ಮುಖ್ಯಮಂತ್ರಿ ಪುತ್ರ ವಿಜೇಯಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ ‘ಜಲ ಸಂಪನ್ಮೂಲದಂಥ ದೊಡ್ಡ ಇಲಾಖೆ ನಡೆಸುತ್ತಿದ್ದೇನೆ. ಇದುವರೆಗೂ ಒಂದೇ ಒಂದು ಫೋನ್‌ ಮಾಡಿಲ್ಲ. ನಮ್ಮ ಅಧಿಕಾರದಲ್ಲಿ ಮೂಗು ತೂರಿಸಿಲ್ಲ’ ಎಂದರು.

ವಿಶ್ವನಾಥ್ ದುಡುಕುತ್ತಿದ್ದಾರೆ: ಎಂ.ಟಿ.ಬಿ. ನಾಗರಾಜ್
ತುಮಕೂರು: ಸಚಿವ ಸ್ಥಾನ ದೊರೆಯದ ಬಗ್ಗೆ ಎಚ್.ವಿಶ್ವನಾಥ್ ಅವರು ಬೇಸರದಿಂದ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋತಿರುವ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಹಲವು ಅವಕಾಶಗಳು ಇವೆ. ಆದರೆ ಅವರು ದುಡುಕುತ್ತಿದ್ದಾರೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರು ಒಂದು ತಿಂಗಳ ನಂತರ ಸಚಿವರಾಗುವುದು ಖಚಿತ. ಈ ಬಗ್ಗೆ ಅನುಮಾನಗಳು ಬೇಡ ಎಂದರು.

‘ಸಚಿವ ಸ್ಥಾನ ಆಕಾಂಕ್ಷಿಗಳ ಅಸಮಾಧಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಮನಗೊಳಿಸುವರು. ನನಗೆ ಯಾವ ಖಾತೆಯನ್ನಾದರೂ ನೀಡಲಿ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಹಾಗೂ ಹೈಕಮಾಂಡ್ ಉತ್ತಮ ಖಾತೆ ನೀಡುವರು ಎನ್ನುವ ವಿಶ್ವಾಸ ಇದೆ’ ಎಂದು ಹೇಳಿದರು.


Spread the love

About Laxminews 24x7

Check Also

ದೇಶನೂರ| ನಿರ್ಲಕ್ಷ್ಯಕ್ಕೊಳಗಾದ ಪ್ರೇಮದ ಸಂಕೇತ ‘ನಿರಂಜನಿ ಮಹಲ್‌’

Spread the love ನೇಸರಗಿ (ಬೆಳಗಾವಿ ಜಿಲ್ಲೆ): ಕಿತ್ತೂರು ರಾಣಿ ಚನ್ನಮ್ಮನ ಕಾಲದಲ್ಲಿ ಉಪರಾಜಧಾನಿಯಾಗಿ ಮೆರೆದ ಬೈಲಹೊಂಗಲ ತಾಲ್ಲೂಕಿನ ದೇಶನೂರ ಗ್ರಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ