Breaking News
Home / ರಾಜ್ಯ / ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ

Spread the love

ಬೆಂಗಳೂರು, ಜ.14- ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಅಡಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಇಂದು ಬೃಹತ್ ಪಾದಯಾತ್ರೆ ಪ್ರಾರಂಭಿಸಲಾಯಿತು. ಪಂಚಮಸಾಲಿ ಸಮಾಜದ ಪಂಚಲಕ್ಷ ಹೆಜ್ಜೆಗಳು ಎಂಬ ಶೀರ್ಷಿಕೆಯಡಿ ಕೈಗೊಂಡಿರುವ ಈ ಪಾದಯಾತ್ರೆಯನ್ನು ಬಸವಣ್ಣನವರ ಐಕ್ಯ ಮಂಟಪ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿದ್ದು, ಪಂಚಮಸಾಲಿ ರಾಷ್ಟ್ರೀಯ ಘಟಕ, ರಾಜ್ಯ ಯುವ ಘಟಕ, ರಾಜ್ಯದ ವಿವಿಧ ಘಟಕಗಳ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಮಸಾಲಿ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಸಮಾಜ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಅಡಿಯಲ್ಲಿ ಮೀಸಲಾತಿ ನೀಡಬೇಕೆಂದು 2012ರಿಂದಲೂ ಹೋರಾಟ ಮಾಡುತ್ತಿದೆ. ಸರ್ಕಾರಕ್ಕೆ ಹಲವು ಗಡುವುಗಳನ್ನು ನೀಡಿದೆ. ನಮ್ಮವರೇ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ನಾವು ಆಗ್ರಹಿಸಿದ್ದೆವು. ಆದರೆ, ನಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ನಾವು ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೆ 700ಕಿ.ಮೀ. ಐತಿಹಾಸಿಕ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಹೇಳಿದರು.

ಈ ಪಾದಯಾತ್ರೆಯನ್ನು ಹಿಂಪಡೆಯುವುದಾಗಿ ನಾವು ಎಲ್ಲೂ ಹೇಳಿಲ್ಲ. ಸಚಿವರಾದ ಮುರುಗೇಶ್ ನಿರಾಣಿ ಅವರು ಭಾವೋದ್ವೇಗದಲ್ಲಿ ಮಾತನಾಡಿದ್ದಾರೆ. ಅವರು ಈಗ ಸಚಿವರಾಗಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಅಡಿ ಮೀಸಲಾತಿಯನ್ನು ದೊರಕಿಸಿಕೊಡಬೇಕು. ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಸಂಪುಟದಲ್ಲಿ ಚರ್ಚಿಸಿ ಶಿಫಾರಸು ಮಾಡಬೇಕೆಂದು ನಾವು ಅವರಲ್ಲೂ ಕೂಡ ಮನವಿ ಮಾಡುತ್ತೇವೆ ಎಂದು ಹೇಳಿದರು.

ಸಿ.ಸಿ.ಪಾಟೀಲ್, ಕರಡಿ ಸಂಗಣ್ಣ ಅವರು ಪಾದಯಾತ್ರೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಸದ್ಯದಲ್ಲೇ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೇಡಿಕೆ ಈಡೇರಿಸುವ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸೋಣ ಎಂದು ಹೇಳಿದರು. ಆದರೆ, ನಾವು ನವೆಂಬರ್ 28, ಡಿಸೆಂಬರ್ 12ರ ವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೆವು. ಈಗಲೂ ಕೂಡ ಕಾಲ ಮಿಂಚಿಲ್ಲ. ನಾಡದೊರೆಗಳು ಅಮಿತ್ ಷಾ ಅವರೊಂದಿಗೆ ಚರ್ಚಿಸಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದರು.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ