ಚಿಕ್ಕೋಡಿ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಅಂಬೋಲಿಯ ಮಹಾದೇವಗಢ ಪಾಯಿಂಟ್‌ನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ನಿಪ್ಪಾಣಿ ತಾಲೂಕಿನ ಪ್ರಸಿದ್ಧ ವೈದ್ಯ ಡಾ. ಅಯೂಬ್ ಸಯ್ಯದ್ (೪೬) ಅವರು ಆಳವಾದ ಕಣಿವೆಗೆ ಬಿದ್ದು ಕಣ್ಮರೆಯಾಗಿದ್ದಾರೆ.
ನಿಪ್ಪಾಣಿ ತಾಲೂಕಿನ ಜತ್ರಾಟ್ ನಿವಾಸಿಯಾಗಿರುವ ಡಾ. ಅಯೂಬ್ ಸಯ್ಯದ್ ಅವರು ಮಂಗಳವಾರ (ಆಗಸ್ಟ್ ೪) ತಮ್ಮ ಸ್ನೇಹಿತರೊಡನೆ ಅಂಬೋಲಿಗೆ ಪ್ರವಾಸ ಕೈಗೊಂಡಿದ್ದರು. ಸಂಜೆ ಸುಮಾರು ೫:೩೦ರ ಸುಮಾರಿಗೆ ಮಹಾದೇವಗಢ ಪಾಯಿಂಟ್‌ನಲ್ಲಿ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದಾಗ, “ಸ್ವಲ್ಪ ಪಕ್ಕದಲ್ಲೇ ತಿರುಗಾಡಿ ಬರುತ್ತೇನೆ” ಎಂದು ಹೇಳಿ ತೆರಳಿದ್ದರು. ಆದರೆ, ಆ ಸಮಯದಲ್ಲಿ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸಿದ್ದರಿಂದ ಅವರಿಗೆ ಮುಂದಿನ ಹಾದಿ ಸರಿಯಾಗಿ ಕಾಣಿಸದೆ, ಕಾಲು ಜಾರಿ ಆಳವಾದ ದರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಸಾಕಷ್ಟು ಸಮಯ ಕಳೆದರೂ ಡಾ. ಸಯ್ಯದ್ ಹಿಂತಿರುಗದಿದ್ದಾಗ ಆತಂಕಗೊಂಡ ಸ್ನೇಹಿತರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಅವರು ಕಣಿವೆಗೆ ಬಿದ್ದಿರಬಹುದು ಎಂದು ಶಂಕಿಸಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅಂಬೋಲಿ ಪೊಲೀಸ್ ನಿರೀಕ್ಷಕ ರಾಜೇಂದ್ರ ಮಕ್ದೂಮ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ತಕ್ಷಣವೇ ರಕ್ಷಣಾ ಪಡೆಗಳೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಿದರು.
ಸಂಜೆ ತಡರಾತ್ರಿಯವರೆಗೂ ಪೊಲೀಸರು ಮತ್ತು ಸ್ಥಳೀಯ ರಕ್ಷಣಾ ತಂಡಗಳು ಸುದೀರ್ಘ ಶೋಧ ನಡೆಸಿದರೂ ವೈದ್ಯರ ಸುಳಿವು ಸಿಗಲಿಲ್ಲ. ಪ್ರದೇಶದಲ್ಲಿ ಆವರಿಸಿದ್ದ ದಟ್ಟವಾದ ಮಂಜು ಮತ್ತು ಕತ್ತಲೆಯ ಕಾರಣದಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಇಂದು ಬೆಳಿಗ್ಗೆಯಿಂದಲೇ ಅಂಬೋಲಿ ಪೊಲೀಸರು ಹಾಗೂ ಸಾಹಸಿ ರಕ್ಷಣಾ ಪಡೆಗಳು ಜಂಟಿಯಾಗಿ ಮಹಾದೇವಗಢ ಕಣಿವೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದು, ವೈದ್ಯರ ಪತ್ತೆಗೆ ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ. ಘಟನೆಯಿಂದಾಗಿ ನಿಪ್ಪಾಣಿ ಹಾಗೂ ಅಂಬೋಲಿ ಭಾಗದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ
Laxmi News 24×7