ಯಮಕನಮರಡಿ : ಮುಂಬರುವ 2028 ಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿಯಾಗಲಿ ಎಂದು ಹತ್ತರಗಿಯ ಹತ್ತರಗಿ ಸುಕ್ಷೇತ್ರ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹತ್ತರಗಿಯ ನೂತನ ಗ್ರಾಮ ಸ್ವರಾಜ್ ಸೌಧ (ಗ್ರಾಮ ಪಂಚಾಯತ ) ಕಟ್ಟಡವನ್ನು ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಯಮಕನಮರಡಿ ಕ್ಷೇತ್ರದ ಶಾಸಕರು ಜಿಲ್ಲೆಯ ಉಸ್ತವಾರಿ ಸಚಿವರಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮಯ ಸಂಗತಿ. ಜ.26 ಗಣರಾಜ್ಯೋತ್ಸವಕ್ಕೆ ಹತ್ತರಗಿ ಗ್ರಾಮ ಸ್ವರಾಜ್ ಸೌಧ ಕಟ್ಟಡವನ್ನು ಈ ಭಾಗದ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ. ಅದೇ ರೀತಿ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಹೊಂದಿರುವ ಸತೀಶ ಜಾರಕಿಹೊಳಿ ಅವರು 2028 ಕ್ಕೆ ಮುಖ್ಯಮಂತ್ರಿಯಾಗಲಿ ಎನ್ನುವುದು ಈ ಭಾಗದ ಜನರ ಆಶಯವಾಗಿದೆ ಎಂದರು.
ಹತ್ತರಗಿ ಸ್ವರಾಜ್ಯ ಸೌಧ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ನೂತನ ಗ್ರಾಮ ಪಂಚಾಯತ ಕಟ್ಟಡ ಸುಂದರವಾಗಿದ್ದರೇ ಸಾಲದು, ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯತ ಆಡಳಿತ ಶ್ರಮಿಸಬೇಕು. ಸರಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಯಮಕನಮರಡಿ ಕ್ಷೇತ್ರವು ಬಹುತೇಕ ಮುಳುಗಡೆ ಪ್ರದೇಶವಾಗಿದ್ದು ಈ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಗ್ರಾಮ ವಿಕಾಸ ಯೋಜನೆಯಡಿ ಗ್ರಾಮದ ವಾರ್ಡ್ ಒಂದಕ್ಕೆ ಸುಮಾರು 4 ಕೋಟಿ. ರೂ ಮಂಜೂರಿ ಮಾಡಿ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬಳಿಕ ಹರಿಮಂದಿರದ ಡಾ.ಆನಂದ ಮಹಾರಾಜ ಗೋಸಾವಿ ಅವರು ಮಾತನಾಡಿ, ಹತ್ತರಗಿಯ ಗ್ರಾಮ ಸ್ವರಾಜ್ ಸೌಧವು ಪಕ್ಕದ ಊರಿನವರಿಗೆ ಮಾದರಿಯಾಗಿದೆ. ಗ್ರಾಮ ಸ್ವರಾಜ್ಯವು ಗಾಂಧಿಜೀ ಅವರ ಪರಿಕಲ್ಪನೆಯಾಗಿದ್ದು, ಅವರ ಪರಿಕಲ್ಪನೆಯ ಕನಸು ನನಸಾಗುವಂತೆ ಗ್ರಾಮ ಪಂಚಾಯತ ಸಿಬ್ಬಂದಿ ಹಾಗೂ ಸದಸ್ಯರು ಕಾರ್ಯ ನಿರ್ವಹಿಸಬೇಕು. ಕಳೆದ 20 ವರ್ಷಗಳಿಂದ ಯಮಕನಮರಡಿ ಭಾಗದ ಎಲ್ಲ ಹಳ್ಳಿಗಳ ಅಭಿವೃದ್ದಿ ಪಣತೊಟ್ಟಿರುವ ಸಚಿವ ಸತೀಶ ಜಾರಕಿಹೊಳಿ ಅವರ ಪರಿಶ್ರಮಕ್ಕೆ ನೂತನ ಕಟ್ಟಡ ಸಾಕ್ಷಿಯಾಗಿದೆ ಎಂದರು.
ಗ್ರಾಮ ಪಂಚಾಯತ ಪಿಡಿಒ ಆನಂದ ಹೊಳೆನ್ನವರ ಪ್ರಾಸ್ತಾವಿಕ ನುಡಿಗಳನ್ನಾಡಿರು.
ಹಿರಿಯ ಮುಖಂಡರಾದ ರವೀಂದ್ರ ಜಿಂಡ್ರಾಳಿ, ಮಾಜಿ ಗ್ರಾಪಂ ಅಧ್ಯಕ್ಷ ಮಹಾದೇವ ಪಟ್ಟೋಳಿ ಮಾತನಾಡಿದರು.
ಈ ವೇಳೆ ಹುಕ್ಕೇರಿ ತಾಪಂ ಇಒ ಟಿ.ಆರ್.ಮಲ್ಲಾಡದ, ಹುಕ್ಕೇರಿ ಪಂ.ರಾ.ಇಂ ಉಪವಿಭಾಗದ ನಿವೃತ್ತ ಎಇ ಎ.ಬಿ.ಪಟ್ಟಣಶೆಟ್ಟಿ, ಎಸ್.ಎ.ಬೂಸಗೋಳ, ಗ್ರಾಪಂ ಅಧ್ಯಕ್ಷ ಸಮೀರ ಬೇಪಾರಿ, ಉಪಾಧ್ಯಕ್ಷೆ ಅಕ್ಷತಾ ಭೀಮಗೋಳ, ಯಮಕನಮರಡಿ ಸಿಪಿಐ ಜಾವೀದ ಮುಶಾಪುರಿ, ಚಿಕ್ಕೋಡಿ ಪಂ.ರಾ.ಇಂ ವಿಭಾಗದ ಎಇ ಪ್ರವೀಣ ಮಠಪತಿ ಸೇರಿದಂತೆ ಇತರರು ಇದ್ದರು.
Laxmi News 24×7