ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಈ ದೇಶದ ಇತಿಹಾಸದಿಂದ ಅಳಿಸಿಹಾಕಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿ ಹಾಗೂ ಅವರ ಅಧಿಕಾರ ಯಾವುದೂ ಶಾಶ್ವತವಲ್ಲ. ಆ ಪಕ್ಷ ಇನ್ನೆಷ್ಟು ದಿನ ಇರುತ್ತದೆ? ಎಲ್ಲದಕ್ಕೂ ಕೊನೇ ಎಂಬುದು ಇರಲೇ ಬೇಕಲ್ಲವೇ?” ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.,
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ. ಅಲೆಗ್ಸಾಂಡರ್ ದಿ ಗ್ರೇಟ್ ಇಡೀ ಪ್ರಪಂಚದ ಮುಕ್ಕಾಲು ಪಾಲು ಗೆದ್ದವರೇ ಶಾಶ್ವತವಲ್ಲ. ಸದ್ದಾಂ ಹುಸೇನ್ ಕೊನೆಗಾಲದಲ್ಲಿ ಅವಿತುಕೊಳ್ಳಬೇಕಾಯಿತು. ಇನ್ನು ಬೇರೆಯವರದು ಯಾವ ಲೆಕ್ಕ? ಮನರೇಗಾ ಹೆಸರು ಬದಲಾವಣೆ ವಿರೋಧಿಸಿ 2026 ರ ಜನವರಿ 5 ನೇ ತಾರೀಕಿನಿಂದ ಹೊಸ ಹೋರಾಟ ರೂಪಿಸಲಾಗುವುದು. ಪಂಚಾಯತಿ ಮಟ್ಟದಿಂದ ಈ ಹೋರಾಟ ಆರಂಭಿಸಲಾಗುವುದು” ಎಂದು ತಿಳಿಸಿದರು.
ಗ್ಯಾರಂಟಿ ಸಮಿತಿ ಸದಸ್ಯರು, ಬೆಸ್ಕಾಂ, ಆರೋಗ್ಯ ಸಮಿತಿ ಸೇರಿದಂತೆ ಇತರೇ ಇಲಾಖೆಗಳಿಂದ ನಾಮನಿರ್ದೇಶನ ಮಾಡಿರುವ ಸದಸ್ಯರ ಸಂಖ್ಯೆಯೇ 150- 200 ಇದ್ದು ಇವರೆಲ್ಲರೂ ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರ ಉಸ್ತುವಾರಿಗೆ ಜಿ.ಸಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ” ಎಂದರು.
“ಎರಡು ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕಿದೆ. ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ” ಎಂದರು.
“ಅಂದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಎಐಸಿಸಿ ಅಧಿವೇಶನ ಹೇಗೆ ನಡೆಯಿತು ಎನ್ನುವ ಕುರಿತಾದ ಗಾಂಧಿ ಭಾರತ ಪುಸ್ತಕವನ್ನ ರೂಪಿಸಿದ್ದೇನೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಲಭ್ಯವಿದೆ. ಇದರ ಬಿಡುಗಡೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆ ಮಾಡಿಸಬೇಕು ಎಂದು ಅವರ ಸಮಯ ಕೇಳಿದ್ದೇನೆ. ಇದೇ ಭಾರತ್ ಜೋಡೋ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು” ಎಂದರು.
Laxmi News 24×7