Breaking News

2ನೇ ವಿಮಾನ ನಿಲ್ದಾಣದ ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ: ಸಚಿವ ಎಂ.ಬಿ.ಪಾಟೀಲ್

Spread the love

ಬೆಂಗಳೂರು: ರಾಜಧಾನಿಯ ಸಮೀಪ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳದ ಅನುಕೂಲ ಮತ್ತು ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಟೆಂಡರ್ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು 2026ರ ಜನವರಿ 12 ಕೊನೆಯ ದಿನವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಶನಿವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, 2ನೇ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರ್ಕಾರವು ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಸ್ಥಳಗಳನ್ನು ಗುರುತಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತಮಟ್ಟದ ತಂಡವು ಇವುಗಳ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ನೀಡಿದೆ. ಈಗ ಟೆಂಡರ್​​ನಲ್ಲಿ ಆಯ್ಕೆಯಾಗುವ ಸಲಹಾ ಸಂಸ್ಥೆಯು 5 ತಿಂಗಳಲ್ಲಿ ಸರ್ಕಾರಕ್ಕೆ ತನ್ನ ಸಮಗ್ರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿ ಕೊಡಬೇಕಾಗುತ್ತದೆ ಎಂದಿದ್ದಾರೆ.

ಕಳೆದ 5 ವರ್ಷಗಳಲ್ಲಿ ವಾರ್ಷಿಕವಾಗಿ 250 ಕೋಟಿ ರೂ. ಮೊತ್ತದ ಕೆಲಸಗಳನ್ನು ನಿರ್ವಹಿಸಿರುವಂತಹ ಮತ್ತು ಸದರಿ ಕ್ಷೇತ್ರದಲ್ಲಿ ಕನಿಷ್ಠ ಪಕ್ಷ ಐದು ಯೋಜನೆಗಳನ್ನಾದರೂ ನಿರ್ವಹಿಸಿರುವ/ಸಲಹಾ ವರದಿ ನೀಡಿರುವಂತಹ ಸಂಸ್ಥೆಗಳು ಟೆಂಡರ್​ನಲ್ಲಿ ಭಾಗವಹಿಸಬಹುದು. ಟೆಂಡರ್​​ನಲ್ಲಿ ಆಯ್ಕೆಯಾಗುವ ಸಂಸ್ಥೆಯು ನಾವು ಸೂಚಿಸುತ್ತಿರುವ ಮೂರೂ ಸ್ಥಳಗಳ ಮಳೆ ಪ್ರಮಾಣ, ಭೂ ಲಕ್ಷಣ, ವಿದ್ಯುತ್, ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆಯಂತಹ ಮೂಲಸೌಕರ್ಯಗಳು, ಸುತ್ತಮುತ್ತಲಿನ ಜನಸಂಖ್ಯೆ, ಅಭಿವೃದ್ಧಿ, ಶಬ್ದ ಮತ್ತು ವಿಮಾನ ನಿಲ್ದಾಣದಿಂದ ಉಂಟಾಗುವ ಮಾಲಿನ್ಯ ಇತ್ಯಾದಿಗಳತ್ತ ಗಮನ ಹರಿಸಲಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಉದ್ದೇಶಿತ 2ನೇ ವಿಮಾನ ನಿಲ್ದಾಣ ಅಭಿವೃದ್ಧಿಗೆ ತಗಲುವ ವೆಚ್ಚ, ಅಗತ್ಯ ಇರುವ ಭೂಮಿ, ರಕ್ಷಣಾ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ, ಹಲವು ಕಡೆಗಳಿಂದ ಪಡೆಯಬೇಕಾಗುವ ಅನುಮೋದನೆಗಳ ವಿವರಗಳು ಮುಂತಾದವನ್ನೂ ಈ ಕಾರ್ಯಸಾಧ್ಯತಾ ವರದಿಯಲ್ಲಿ ನೀಡಬೇಕಾಗುತ್ತದೆ. ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದಿಂದ ಇಲ್ಲಿನ ಕೈಗಾರಿಕೆ, ಪ್ರವಾಸೋದ್ಯಮ, ಜನರ ಓಡಾಟ ಇತ್ಯಾದಿ ಅಂಶಗಳನ್ನೂ ಅದು ವಿವರಿಸಲಿದೆ ಎಂದಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ