Breaking News

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳ ಸ್ಥಗಿತಗೊಳಿಸಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್​ ರದ್ದು ಪಡಿಸಿದೆ.

Spread the love

ಬೆಂಗಳೂರು : ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಜನೌಷಧಿ ಕೇಂದ್ರಗಳನ್ನು (ಜೆಎಕೆ) ಮುಚ್ಚುವಂತೆ ನಿರ್ದೇಶಿಸಿ ಕಳೆದ ಮೇ 14 ರಂದು ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿ ಆದೇಶಿಸಿದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಎಲ್‌. ರಾಕೇಶ್‌ ಮಹಾಲಿಂಗಪ್ಪ ಮತ್ತಿತರರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಬಡವರಿಗೆ ನೀಡಲಾಗುವ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿರಲಿ ಅಥವಾ ಕಡಿಮೆ ಬೆಲೆಗೆ ನೀಡುತ್ತಿರಲಿ, ಅದರಲ್ಲಿ ಸರ್ಕಾರದ ಒಂದು ವಿಭಾಗವು ಹಸ್ತಕ್ಷೇಪ ಮಾಡಲು ನಾವು ಅನುಮತಿ ನೀಡುವುದಿಲ್ಲ ಎಂದು ಮೌಖಿಕವಾಗಿ ಹೇಳಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ರಾಜ್ಯ ಸರ್ಕಾರವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧವನ್ನು ಪೂರೈಸಲು ನಿರ್ಧರಿಸಿದೆ ಮತ್ತು ಆದ್ದರಿಂದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳ ಕಾರ್ಯಾಚರಣೆ ಅನಿವಾರ್ಯವಲ್ಲ. ಅಲ್ಲದೇ, ಔಷಧ ಕೇಂದ್ರಗಳು ಹೊರಗೆ ಕಾರ್ಯನಿರ್ವಹಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಸರ್ಕಾರಿ ಆಸ್ಪತ್ರೆ ಆವರಣದೊಳಗೆ ಮಾತ್ರ ಈ ಕೇಂದ್ರಗಳ ಕಾರ್ಯಾಚರಣೆಯನ್ನು ನಿಲ್ಲಿಸಲು ಆದೇಶಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರು, ಜನೌಷಧ ಕೇಂದ್ರಗಳ ಮಾಲೀಕರ ಜತೆ ಸಮಾಲೋಚಿಸದೇ ಅಥವಾ ಎಚ್ಚರಿಕೆ ನೀಡದೆ ತರಾತುರಿಯಲ್ಲಿ ಸರ್ಕಾರ ಈ ಆದೇಶ ಜಾರಿಗೊಳಿಸಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಒಂದು ಸಣ್ಣ ಕೇಂದ್ರವು ಉಚಿತ ಔಷಧ ವಿತರಣೆಗೆ ಅಡ್ಡಿಯಾಗುತ್ತಿದೆ ಎಂದು ಸರ್ಕಾರ ಹೇಳುವುದನ್ನು ಒಪ್ಪಲಾಗದು. ಸರ್ಕಾರ ಮೊದಲಿಂದಲೂ ಉಚಿತವಾಗಿ ಔಷಧ ನೀಡುತ್ತಿದೆ. ಕೇಂದ್ರಗಳಿಂದ ಸರ್ಕಾರ ಉದ್ದೇಶಕ್ಕೆ ಅಡ್ಡಿಯಾಗುತ್ತಿಲ್ಲ. ಸರ್ಕಾರ ಮತ್ತು ಅರ್ಜಿದಾರರಿಬ್ಬರೂ ಸಹ ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿವೆ ಎಂದು ಪೀಠಕ್ಕೆ ತಿಳಿಸಿದರು.

ಅಲ್ಲದೇ, ಮೂಲಸೌಕರ್ಯ ಅಭಿವೃದ್ಧಿ, ಔಷಧ ದಾಸ್ತಾನು, ಉಪಕರಣಗಳು ಮತ್ತು ಪೀಠೋಪಕರಣಗಳು, ಸಿಬ್ಬಂದಿ ವೇತನಗಳು, ಕೇಂದ್ರವನ್ನು ನಡೆಸುವ ಉದ್ದೇಶಕ್ಕಾಗಿ ಅಗತ್ಯ ಪರವಾನಗಿಗಳು ಮತ್ತು ಅನುಮತಿಗಳನ್ನು ಪಡೆಯಲು ಅರ್ಜಿದಾರರು ಸಾಕಷ್ಟು ಹಣ ವ್ಯಯ ಮಾಡಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದಿಂದ ‘ಕಾನೂನುಬದ್ಧ ನಿರೀಕ್ಷೆ‘ ಇದೆ. ಆದರೂ ವಿವಾದಿತ ಆದೇಶ ಸಂವಿಧಾನದ 19(1)(ಜ)(ಉದ್ಯೋಗದ ಹಕ್ಕು) ವಿಧಿ ಅಡಿ ಅರ್ಜಿದಾರರ ಜೀವನೋಪಾಯದ ಹಕ್ಕನ್ನು ಮತ್ತು ಸಂವಿಧಾನದ 21ನೇ(ಜೀವಿಸುವ ಹಕ್ಕು) ವಿಧಿ ಅಡಿಯಲ್ಲಿ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ