ಅಮೀನಗಢದಲ್ಲಿ ‘ಲುಂಗಿ ಗ್ಯಾಂಗ್’ ಕರಾಮತ್ತು: ಸಿಸಿಟಿವಿಯಲ್ಲಿ ಸೆರೆ, ಕಳ್ಳತನ ಯತ್ನ ವಿಫಲ!
ಬಾಗಲಕೋಟೆ ಜಿಲ್ಲೆಯ ಅಮೀನಗಢ ಪಟ್ಟಣದಲ್ಲಿ ಕಳ್ಳರ ಉಪಟಳ.
ಮುಖಕ್ಕೆ ಮಾಸ್ಕ್, ಕೈಲಿ ರಾಡ್: ಸಿಸಿಟಿವಿಯಲ್ಲಿ ಕಳ್ಳರ ಪ್ರಯತ್ನ ದೃಶ್ಯ.
ದಡ್ಡೆನವರ ಮನೆ, ಟೈಲ್ಸ್ ಅಂಗಡಿಯಲ್ಲಿ ಕಳ್ಳತನ ಯತ್ನ.
ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಬಾಗಲಕೋಟೆ ಜಿಲ್ಲೆಯ ಅಮೀನಗಢ ಪಟ್ಟಣದಲ್ಲಿ ‘ಲುಂಗಿ ಗ್ಯಾಂಗ್’ ಎಂದು ಕರೆಯಲ್ಪಡುವ ಮೂವರು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದು, ಇವರ ಸಂಪೂರ್ಣ ಕರಾಮತ್ತು ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರವಿವಾರ ರಾತ್ರಿ 11:45 ರಿಂದ 1:45ರ ಮಧ್ಯೆ ಈ ಘಟನೆ ನಡೆದಿದೆ. ಕಳ್ಳರು ಲುಂಗಿ ಉಟ್ಟು, ಮುಖಕ್ಕೆ ಮಾಸ್ಕ್ ಧರಿಸಿ, ಕೈಯಲ್ಲಿ ರಾಡ್ ಹಿಡಿದು ಪಟ್ಟಣದ ನಿವಾಸಿಗಳಾದ ದಡ್ಡೆನವರ ಎಂಬುವರ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಪಿ ಎಸ್ ಹಳ್ಳೂರ ಅವರ ಮನೆ ಬಳಿಯೂ ಸಂಚಾರ ಮಾಡಿ, ಎಸ್.ಪಿ.ಆರ್. ಖಾದ್ರಿ ಎಂಬುವರ ಕಚೇರಿ ಮತ್ತು ಮಂಜು ಹೂಗಾರ ಅವರ ಟೈಲ್ಸ್ ಅಂಗಡಿಯಲ್ಲಿಯೂ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಆದರೆ, ಕಳ್ಳರ ಎಲ್ಲಾ ಪ್ರಯತ್ನಗಳು ವಿಫಲಗೊಂಡಿದ್ದು, ಅವರಿಗೆ ಯಾವುದೇ ವಸ್ತು ಸಿಗದೆ ಬರಿಗೈಯಲ್ಲಿ ವಾಪಸ್ ತೆರಳಿದ್ದಾರೆ. ಕಳ್ಳತನ ಯತ್ನದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಈ ಸಂಬಂಧ ಅಮೀನಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಪಟ್ಟಣದಲ್ಲಿ ಈ ‘ಲುಂಗಿ ಗ್ಯಾಂಗ್’ನ ಉಪಟಳದಿಂದಾಗಿ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
Laxmi News 24×7