ಹಾವೇರಿ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಾರಿಡಾರ್ನಲ್ಲಿ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆಯಲಾರಂಭಿಸಿದೆ. ಮಹಿಳಾ ಯೋಗ, ರಾಜ್ಯ ಉಚ್ಚನ್ಯಾಯಾಲಯ ಮತ್ತು ಮಕ್ಕಳ ರಕ್ಷಣಾ ಘಟಕದ ದೂರಿನ ಮೇರೆಗೆ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದರು.
ಘಟನೆ ಕುರಿತಂತೆ ತನಿಖಾ ತಂಡ ರಚಿಸಲಾಗಿದ್ದು ತಂಡದ ಸದಸ್ಯರು ಸಿಸಿಟಿವಿ ದೃಶ್ಯಗಳನ್ನು ವೀಕ್ಷಣೆ ನಡೆಸಿದರು. ಒಂದು ಗಂಟೆ ಕಾಲ ಸಿಸಿಟಿವಿ ಪರಿಶೀಲನೆ ಹಾಗೂ ಬಾಣಂತಿ ಮಹಿಳೆಯನ್ನು ಜಿಲ್ಲಾಧಿಕಾರಿ ಮಾತನಾಡಿಸಿ ಮಾಹಿತಿ ಪಡೆದರು. ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಮಕ್ಕಳ ಆಯೋಗದಿಂದ ಆರೋಗ್ಯ ಇಲಾಖೆಯ ಕಾರಣ ಕೇಳಿ ವರದಿ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿರುವುದಾಗಿ ಡಿಸಿ ಹೇಳಿದರು.ಹೆರಿಗೆ ವಾರ್ಡ್ ಮತ್ತು ಕಾರಿಡಾರ್ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಇವತ್ತು ಸಂಜೆ ವರದಿ ಸಿಗಲಿದೆ
ಎಂದು ತಿಳಿಸಿದರು. “ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ವರದಿಯನ್ನು ನೀಡಬೇಕು ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.
ಉಚ್ಚ ನ್ಯಾಯಾಲಯ ಹಾಗೂ ಮಕ್ಕಳ ಹಕ್ಕುಗಳ ಆಯೋಗದವರು ಈ ಬಗ್ಗೆ ವರದಿ ಕೇಳಿದ್ದಾರೆ. ಈ ಬಗ್ಗೆ ಒಂದು ತಂಡ ಮಾಡಿದ್ದೇವೆ. ತಂಡ ಈಗಾಗಲೇ ಸಿಸಿ ಕ್ಯಾಮರಾಗಳ ದೃಶ್ಯಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ” ಜಿಲ್ಲಾಧಿಕಾರಿ ತಿಳಿಸಿದರು.
Laxmi News 24×7