ಧರ್ಮಸ್ಥಳ ಪ್ರಕರಣದ ಬಗ್ಗೆ ಸರ್ಕಾರಕ್ಕೂ SIT ವರದಿ; ಬೆಳಗಾವಿ ಅಧಿವೇಶನದಲ್ಲಿ ತಿಳಿಸುತ್ತೇವೆ ಎಂದ ಜಿ.ಪರಮೇಶ್ವರ್
ಬೆಂಗಳೂರು: ಧರ್ಮಸ್ಥಳ ಪ್ರಕರಣ ಸಂಬಂಧ ಸರ್ಕಾರಕ್ಕೂ ವಿಶೇಷ ತನಿಖಾ ತಂಡ (ಎಸ್ಐಟಿ) ವರದಿ ನೀಡಲಿದ್ದು, ಬೆಳಗಾವಿ ಅಧಿವೇಶನದಲ್ಲಿ ಅದರಲ್ಲಿನ ಅಂಶಗಳನ್ನು ತಿಳಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಲಿದ್ದಾರೆ. ಅದರಲ್ಲಿ ಏನಿದೆ, ಸತ್ಯ ಏನು ಎಲ್ಲವೂ ಗೊತ್ತಾಗುತ್ತದೆ. ಸರ್ಕಾರಕ್ಕೂ ಅವರು ವರದಿ ಕೊಡುತ್ತಾರೆ. ಸರ್ಕಾರವೇ ಎಸ್ಐಟಿ ರಚಿಸಿರುವುದಲ್ವಾ? ನಮಗೂ ಅವರು ವರದಿ ನೀಡುತ್ತಾರೆ. ವರದಿ ಬಂದ ಬಳಿಕ ಏನಿದೆ ಎಂದು ತಿಳಿಯಲಿದೆ. ಏನು ಷಡ್ಯಂತ್ರ ನಡೆದಿದೆ, ಯಾರೆಲ್ಲಾ ಕಾರಣ ಎಂಬುದು ಗೊತ್ತಾಗುತ್ತದೆ ಎಂದರು.
ದರೋಡೆಕೋರರನ್ನು ಹಿಡಿಯುತ್ತೇವೆ: ಬೆಂಗಳೂರು ಎಟಿಎಂ ವಾಹನ ದರೋಡೆ ಪ್ರಕರಣವಾಗಿ ಪ್ರತಿಕ್ರಿಯಿಸುತ್ತಾ, ಪೊಲೀಸರು ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ದರೋಡೆಕೋರರು ಕರ್ನಾಟಕದವರಾ? ಅವರು ಹೊರಗಿನವರಾ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಇನೋವಾ, ಸ್ವಿಫ್ಟ್ ಕಾರಿಗೆ ನಂಬರ್ ಪ್ಲೇಟ್ ಹಾಕ್ಕೊಂಡಿದ್ದರು. ಅವರು ಹೊರಗೆ ದಾಟಿದ್ದಾರಾ? ಯಾವ ವಾಹನದಲ್ಲಿ ಹಣ ಸಾಗಿಸಿದ್ದಾರೆ? ವಾಹನವು ರಾಜ್ಯದ ಹೊರಗೆ ಹೋಗಿದೆಯಾ? ಎಂದು ಹುಡುಕ್ತಿದ್ದೇವೆ. ವಾಹನ ಬದಲಾಯಿಸಿದ್ದಾರೆ ಎಂಬುದು ಗೊತ್ತಾಗಿದೆ. ಖಂಡಿತಾ ದರೋಡೆಕೋರರನ್ನು ಹಿಡಿಯುತ್ತೇವೆ. ಘಟನೆ ವೇಳೆ ಯಾವೆಲ್ಲಾ ವಾಹನಗಳು ಓಡಾಡಿದ್ದವು? ರಾಜ್ಯದ ಹೊರಗೆ ಹೋಗಿರುವ ವಾಹನಗಳೆಷ್ಟು? ಎಲ್ಲದರ ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದರು.
ಎರಡೂವರೆ ವರ್ಷ ಅಂತ ಮಹತ್ವ ಕೊಡಬೇಕಿಲ್ಲ: ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ವಿಚಾರವಾಗಿ ಮಾತನಾಡಿ, ಸರ್ಕಾರಕ್ಕೆ ಎರಡೂವರೆ ವರ್ಷ ಆಗಿದೆ. ಎರಡೂವರೆ ವರ್ಷ ಅಂತ ಮಹತ್ವ ಏನೂ ಕೊಡಬೇಕಿಲ್ಲ. ಅಧಿಕಾರ ಹಸ್ತಾಂತರದ ಬಗ್ಗೆ ಹೈಕಮಾಂಡ್ ಹೇಳಿಲ್ಲ. ಹೈಕಮಾಂಡ್ ಹೇಳಿದರೆ ಅದಕ್ಕೆ ಮಹತ್ವ ಬರುತ್ತದೆ. ಇದುವರೆಗೆ ಎಲ್ಲೂ ಹೈಕಮಾಂಡ್ ನಮಗೆ ತಿಳಿಸಿಲ್ಲ. ಸಿಎಲ್ಪಿ ಸಭೆಯಲ್ಲೂ ಆ ವಿಚಾರ ಚರ್ಚೆಗೆ ಬಂದಿಲ್ಲ. ಹಾಗಾಗಿ ಅದಕ್ಕೆ ಮಹತ್ವ ಯಾಕೆ ಕೊಡಬೇಕು ಎಂದರು.
Laxmi News 24×7