ಬೆಳಗಾವಿ: ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಗಟ್ಟಿ ನಿರ್ಧಾರ ಕೈಗೊಳ್ಳುವ ಮೂಲಕ ಬೆಳಗಾವಿ ಜಿಲ್ಲೆಯ ಬಂಜಾರ ಸಮಾಜಇಡೀ ಸಮಾಜಕ್ಕೆ ಮಾದರಿಯಾಗಿದೆ.
ವರದಕ್ಷಿಣೆ ಪಡೆಯುವುದು ಮತ್ತು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವ ಸಮಾಜದ ಮುಖಂಡರು, ನಿಯಮ ಉಲ್ಲಂಘಿಸಿದವರಿಗೆ ಭಾರಿ ಮೊತ್ತದ ದಂಡ ವಿಧಿಸುವ ದಿಟ್ಟ ನಿರ್ಣಯವನ್ನು ಕೈಗೊಂಡಿದ್ದಾರೆ.
ಸಮಾಜ ರೂಪಿಸಿರುವ ವರದಕ್ಷಿಣೆ ನಿಷೇಧ ನಿಯಮವನ್ನು ಯಾರಾದರೂ ಉಲ್ಲಂಘಿಸಿ ವರದಕ್ಷಿಣೆ ಪಡೆದರೆ ಅಥವಾ ನೀಡಿದರೆ ಅವರಿಗೆ 11 ಲಕ್ಷ ದಂಡ ರೂ. ವಿಧಿಸಲು ಕಟ್ಟುನಿಟ್ಟಿನ ಠರಾವು ಪಾಸು ಮಾಡಲಾಗಿದೆ.
ಸಮಾಜದ ಪ್ರಮುಖರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಬರುವ 35 ತಾಂಡಾಗಳು ಈ ನಿಯಮದ ಅಡಿಗೆ ಬರಲಿವೆ. “ವರದಕ್ಷಿಣೆ ಕೊಡುವುದೂ ಇಲ್ಲ, ಪಡೆಯುವುದೂ ಇಲ್ಲ” ಎಂದು ಸಮಾಜದ ಮುಖಂಡರು ಒಕ್ಕೊರಲಿನಿಂದ ಸಂಕಲ್ಪ ಮಾಡಿದ್ದಾರೆ.
ವರದಕ್ಷಿಣೆ ನಿಷೇಧದ ಜೊತೆಗೆ ಸಮಾಜದಲ್ಲಿನ ಇತರ ಅನಗತ್ಯ ಆಚರಣೆಗಳಿಗೂ ಕಡಿವಾಣ ಹಾಕಲು ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ತಾಂಡಾಗಳಲ್ಲಿ ಬಾಲ್ಯ ವಿವಾಹ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಸಂಕಲ್ಪ ಮಾಡಲಾಗಿದೆ.
ಆಡಂಬರದ ಮದುವೆಗಳು ಹಾಗೂ ದುಬಾರಿ ನಿಶ್ಚಿತಾರ್ಥ ಸಮಾರಂಭಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಮದುವೆ ಹಾಗೂ ಸಮಾರಂಭಗಳ ನಂತರ ನಡೆಯುವ ಮೆರವಣಿಗೆಗಳಲ್ಲಿ ಅತಿಯಾದ ಶಬ್ದದ ಡಿಜೆ ಸೌಂಡ್ ಸಿಸ್ಟಮ್ ಬಳಸುವುದನ್ನು ನಿಷೇಧಿಸಲಾಗಿದೆ. ಬಂಜಾರ ಸಮಾಜದ ಈ ಪ್ರಗತಿಪರ ಹೆಜ್ಜೆಯು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇತರ ಸಮುದಾಯಗಳಿಗೂ ದೊಡ್ಡ ಮಟ್ಟದ ಪ್ರೇರಣೆಯಾಗಿದೆ.
Laxmi News 24×7