ಕೊಪ್ಪಳ : ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ ಮಹಿಳೆಯೊಬ್ಬರ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಅಸ್ವಸ್ಥಗೊಂಡ (39) ವರ್ಷದ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಅವರು ಪ್ರತಿಕ್ರಿಯಿಸಿದ್ದು, ‘ನಿನ್ನೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ಕೊಟ್ಟ ಹಿನ್ನೆಲೆ ಯಲಬುರ್ಗಾ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕೊಟ್ಟಿರುವ ದೂರಿನಲ್ಲಿ ಸಂತ್ರಸ್ತೆ ಹೊಸಪೇಟೆ ನಿವಾಸಿ, ಅವರಿಗೆ ಪರಿಚಯಸ್ಥರಾದ ಲಕ್ಷ್ಮಣ ಎಂಬುವರು ಹಳೆಯ 5000 ಹಣವನ್ನು ಕೊಡುತ್ತೇನೆ, ಕುಷ್ಟಗಿ ಕಡೆಗೆ ಬನ್ನಿ ಎಂದು ಹೇಳಿದ್ದಾರೆ. ನಂತರ ಇವರು ಯಲಬುರ್ಗಾ ಪಕ್ಕದ ಮದ್ಲೂರ ಬಳಿ ಬರುತ್ತಲೇ ಅಲ್ಲಿಗೆ ಆರೋಪಿಯೊಂದಿಗೆ ಮೂವರು ಬಂದು ಅತ್ಯಾಚಾರ ಮಾಡಿದ್ದಾರೆ ಎಂದು ದೂರನ್ನು ಕೊಟ್ಟಿದ್ದರು. ಇದಾದ ನಂತರ ನಾನು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತೆಯನ್ನು ಮೆಡಿಕಲ್ ಕೇರ್ಗೆ ಶಿಫ್ಟ್ ಮಾಡಿಸಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.
Laxmi News 24×7