Breaking News

ಬೆಳಗಾವಿ ಡಿಸಿಸಿ ಬ್ಯಾಂಕ್ 4 ಕ್ಷೇತ್ರಗಳ ಫಲಿತಾಂಶ ಪ್ರಕಟ: 15 ದಿನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

Spread the love

ಬೆಳಗಾವಿ: ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ)ನ ನಾಲ್ಕು ಕ್ಷೇತ್ರಗಳ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ನಿರೀಕ್ಷೆಯಂತೆ ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ, ನಾನಾಸಾಹೇಬ ಪಾಟೀಲ ಮತ್ತು ಮಹಾಂತೇಶ ದೊಡ್ಡಗೌಡರ ಗೆಲುವು ಈಗ ಅಧಿಕೃತವಾಗಿದೆ.

ಬಿಡಿಸಿಸಿ ಬ್ಯಾಂಕಿನ 16 ಕ್ಷೇತ್ರಗಳ ಪೈಕಿ 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ 7 ಕ್ಷೇತ್ರಗಳಿಗೆ ಅ.19ರಂದು ಚುನಾವಣೆ ನಡೆದಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಕೋರ್ಟ್‌ನಲ್ಲಿ ವಿಚಾರಣೆಯಿದ್ದ ಹಿನ್ನೆಲೆ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ ಮತ್ತು ಹುಕ್ಕೇರಿ ಕ್ಷೇತ್ರಗಳ ಮತದಾನಕ್ಕೆ ಮಾತ್ರ ಕೋರ್ಟ್ ಅವಕಾಶ ನೀಡಿತ್ತು. ಸದ್ಯ ಕೋರ್ಟಿನಿಂದ ಅನುಮತಿ ಸಿಕ್ಕಿರುವ ಹಿನ್ನೆಲೆ ಭಾನುವಾರ ಚುನಾವಣಾಧಿಕಾರಿ ಶ್ರವಣ ನಾಯ್ಕ ನಾಲ್ಕು ಕ್ಷೇತ್ರಗಳ ಮತ ಎಣಿಕೆ ನಡೆಸಿ, ಫಲಿತಾಂಶವನ್ನು ಪ್ರಕಟಿಸಿದರು.

ಹುಕ್ಕೇರಿ ಕ್ಷೇತ್ರದಿಂದ ಮಾಜಿ ಸಂಸದ ರಮೇಶ ಕತ್ತಿ (59 ಮತ), ನಿಪ್ಪಾಣಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ(71 ಮತ), ಚನ್ನಮ್ಮನ ಕಿತ್ತೂರು ನಾನಾಸಾಹೇಬ ಪಾಟೀಲ (17 ಮತ) ಹಾಗೂ ಬೈಲಹೊಂಗಲ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ (54 ಮತ) ವಿಜಯಶಾಲಿ ಆಗಿದ್ದಾರೆ. ಈ ನಾಲ್ವರ ವಿರುದ್ಧ ಸೋತವರು ಕ್ರಮವಾಗಿ ರಾಜೇಂದ್ರ ಪಾಟೀಲ 32, ಉತ್ತಮ ಪಾಟೀಲ 48, ವಿಕ್ರಮ ಇನಾಮದಾರ 15 ಹಾಗೂ ವಿಶ್ವನಾಥ ಪಾಟೀಲ 21 ಮತಗಳನ್ನು ಪಡೆದುಕೊಂಡಿದ್ದಾರೆ. ವಿಜೇತರಿಗೆ ಚುನಾವಣಾಧಿಕಾರಿ ಪ್ರಮಾಣಪತ್ರ ವಿತರಿಸಿದರು.

15 ದಿನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ: ಫಲಿತಾಂಶ ಪ್ರಕಟಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಶ್ರವಣ ನಾಯ್ಕ, ನ್ಯಾಯಾಲಯದ ಸೂಚನೆಗಳನ್ನು ಪಾಲಿಸಿ ನಾಲ್ಕು ಕ್ಷೇತ್ರಗಳ ಫಲಿತಾಂಶ ಇಂದು ಪ್ರಕಟಿಸಿದ್ದೇವೆ. ಆದರೆ ನಿಪ್ಪಾಣಿಯ 7 ಮತಗಳನ್ನು ಎಣಿಕೆ ಮಾಡದಂತೆ ಸೂಚಿಸಿತ್ತು. ಅದರ ಹೊರತಾಗಿ ಅ.19ರಂದು ಮತದಾನ ಆಗಿರುವಂತೆ ತೀರ್ಪು ನೀಡಬಹುದೆಂದು ಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ, ಆ 7 ಮತಗಳನ್ನು ಹೊರತುಪಡಿಸಿ ನಿಪ್ಪಾಣಿ ಕ್ಷೇತ್ರದ ಫಲಿತಾಂಶ ಪ್ರಕಟಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.

ನಾನೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಚುನಾಯಿತರಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಮ್ಮ ಬಣದಲ್ಲಿರುವ ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇವೆ. ಅದರಲ್ಲಿ ನಾನೂ ಒಬ್ಬ. ಆದರೆ ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಜೊತೆ ಸೇರಿ ಚರ್ಚೆ ಮಾಡಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ನಮ್ಮ ಬಣ ಗಟ್ಟಿಯಾಗಿದೆ. ಇದೇ ಒಗ್ಗಟ್ಟಿನಲ್ಲಿ ಮುಂದುವರೆಯುತ್ತೇವೆ. ನಮ್ಮವರನ್ನು ಸೆಳೆಯಲು ಪ್ರಯತ್ನಿಸಿದರೂ ಅವರಿಗೆ ನಿರಾಶೆಯಾಗುವುದು ಖಚಿತ ಎನ್ನುತ್ತಲ್ಲೇ ವಿರೋಧಿಗಳಿಗೆ ಅಣ್ಣಾಸಾಹೇಬ ಜೊಲ್ಲೆ ತಿರುಗೇಟು ಕೊಟ್ಟರು.

ವಿಜೇತ ಅಭ್ಯರ್ಥಿ ನಾನಾಸಾಹೇಬ ಪಾಟೀಲ ಮಾತನಾಡಿ, ಒಟ್ಟು 32 ಮತಗಳ ಪೈಕಿ ನನಗೆ 17 ಮತ ಬಂದಿವೆ. ಮೊದಲು ನಮ್ಮ ಬಳಿ ಹತ್ತು ಮತದಾರರು ಮಾತ್ರವಿದ್ದರು. ನಮ್ಮ ವಿರುದ್ಧ ಅಭ್ಯರ್ಥಿ ಬಳಿ 22 ಮತಗಳಿದ್ದವು. ಆದರೆ ಅವರಲ್ಲಿನ 7 ಮತದಾರರು ಅಡ್ಡಮತದಾನ ಮಾಡಿದ್ದಾರೆ. 7 ಜನ ನಮಗೆ ಬೆಂಬಲ ನೀಡಿದ್ದರಿಂದ ವಿಜಯ ಸಾಧಿಸಿದ್ದೇವೆ. ನಮ್ಮ ಕಡೆ ಇದ್ದವರು ಒಬ್ಬರು ಆ ಕಡೆ ಹೋಗಿದ್ದರು. ಆದರೂ ನಾವು ಅದರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಯುದ್ಧದಲ್ಲಿ ಹೇಗಾದರೂ ಗೆಲ್ಲಬಹುದು. ನಾವು ಗೆದ್ದಿದ್ದೇವೆ. ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿಯೇ ಚುನಾವಣೆ ಮಾಡಿದ್ದೇವೆ. ಹೀಗಾಗಿ ಅವರ ಜೊತೆಯೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು‌.

ಮತ್ತೋರ್ವ ವಿಜೇತ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಚನ್ನಮ್ಮನ ಕಿತ್ತೂರು ಕ್ಷೇತ್ರದ ಜವಾಬ್ದಾರಿ ನನ್ನ ಮೇಲೆಯೇ ಇತ್ತು. ಆದರೆ, ಬೇರೆ ಬೇರೆ ಕಾರಣಗಳಿಂದ ಅಲ್ಲಿ ಸೋಲಾಗಿದೆ. ಆದರೂ ಮತದಾನ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ವಿಕ್ರಮ ಇನಾಮದಾರ ಅವರಿಗೂ ಅಭಿನಂದನೆ ಸಲ್ಲಿಸುವೆ. ಕಿತ್ತೂರು ಕ್ಷೇತ್ರದಲ್ಲಿ ಸೋಲಾಗಿದೆ. ಅದನ್ನು ಒಪ್ಪಿದ್ದೇವೆ. ಸಮಯ ಸಂದರ್ಭ ಬಂದಾಗ ಎಲ್ಲದಕ್ಕೂ ಉತ್ತರ ಕೊಡುವೆ. ನನಗೆ ಯಾವುದೇ ಅಸಮಾಧಾನವಿಲ್ಲ. ಮೊದಲಿನಿಂದ ಇದೇ ಬಣದಲ್ಲಿದ್ದೇನೆ. ಅಲ್ಲಿಯೇ ಮುಂದುವರಿಯುತ್ತೇನೆ ಎಂದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ