ಧಾರವಾಡ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಿಸುವ ಕುರಿತು ಸೂಕ್ತ ಮಾಹಿತಿ ಸಂಗ್ರಹಿಸಿ ಅಕ್ಟೋಬರ್ 20 ರಿಂದ 23ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಈ ಮೂರು ದಿನದ ಅವಧಿಯಲ್ಲಿ ಒಟ್ಟು 54 ಜೂಜಾಟ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಪ್ರಕರಣದಲ್ಲಿ 492 ಜನ ಆರೋಪಿತರನ್ನು ವಶಕ್ಕೆ ಪಡೆದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪೊಲೀಸ್ ದಾಳಿ ಸಂದರ್ಭದಲ್ಲಿ ಆರೋಪಿತರಿಂದ 4,41,535 ರೂ.ಗಳ ನಗದು ಜಪ್ತಿ ಮಾಡಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 11 ಪ್ರಕರಣಗಳು ದಾಖಲಾಗಿದ್ದರೆ, ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಪ್ರಕರಣಗಳು, ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 8 ಪ್ರಕರಣಗಳು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಪ್ರಕರಣಗಳು, ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳು, ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳು, ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳು, ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಪ್ರಕರಣಗಳು, ಹಾಗೇ ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಪ್ರಕರಣ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 54 ಜೂಜಾಟ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಪ್ರಕರಣಗಳಲ್ಲಿ ಭಾಗಿಯಾಗಿದ್ದ 492 ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.
| ಪೊಲೀಸ್ ಠಾಣಾ ವ್ಯಾಪ್ತಿ | ಪ್ರಕರಣಗಳು |
| ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ | 11 |
| ಗರಗ ಪೊಲೀಸ್ ಠಾಣೆ | 10 |
| ನವಲಗುಂದ ಪೊಲೀಸ್ ಠಾಣೆ | 8 |
| ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ | 6 |
| ಕುಂದಗೋಳ ಪೊಲೀಸ್ ಠಾಣೆ | 5 |
| ಅಣ್ಣಿಗೇರಿ ಪೊಲೀಸ್ ಠಾಣೆ | 5 |
| ಗುಡಗೇರಿ ಪೊಲೀಸ್ ಠಾಣೆ | 5 |
| ಕಲಘಟಗಿ ಪೊಲೀಸ್ ಠಾಣೆ | 3 |
| ಅಳ್ನಾವರ ಪೊಲೀಸ್ ಠಾಣೆ | 1 |
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರ ಮಾರ್ಗದರ್ಶನದಲ್ಲಿ ಪ್ರಭಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮತ್ತು ಸಿಇಎನ್ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕ ಶಿವಾನಂದ ಕಟಗಿ ಮತ್ತು ಧಾರವಾಡ ಗ್ರಾಮೀಣ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ವಿನೋದ ಮುತ್ತೇದಾರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Laxmi News 24×7