ಚಿಕ್ಕೋಡಿ(ಬೆಳಗಾವಿ): “ನಮ್ಮ ತಂದೆ ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ” ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
“ನಮ್ಮ ತಂದೆಯವರು ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ. ಈ ಸಮಯದಲ್ಲಿ ವೈಚಾರಿಕವಾಗಿ, ಪ್ರಗತಿಪರವಾದ ಸಿದ್ಧಾಂತ ಇಟ್ಟುಕೊಂಡಿರುವ ಅವರಿಗೆ ಮಾರ್ಗದರ್ಶನ ನೀಡಲು ನಾಯಕರು ಬೇಕು. ಆ ಜವಾಬ್ದಾರಿಯನ್ನು ಸಚಿವ ಸತೀಶ್ ಜಾರಕಿಹೊಳಿ ವಹಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟುಕೊಂಡಿರುವ ಎಲ್ಲ ರಾಜಕಾರಣಿಗಳಿಗೆ, ಯುವಕರಿಗೆ ಅವರು ಮಾದರಿಯಾಗಿ ನಮ್ಮನ್ನೆಲ್ಲ ಮುನ್ನಡೆಸಿಕೊಂಡು ಹೋಗುವ ನಂಬಿಕೆ ನನಗಿದೆ” ಎಂದರು.
“ಈ ರೀತಿಯ ತತ್ವ ಬದ್ಧತೆ ಇರುವ ನಾಯಕರು ಸಿಗುವುದು ಬಹಳ ಕಷ್ಟ. ಆದರೆ ಅಂತಹ ಕೆಲಸವನ್ನು ಜಾರಕಿಹೊಳಿ ಮಾಡುತ್ತಿದ್ದಾರೆ. ಇದನ್ನು ಹೀಗೆಯೇ ಮುಂದುವರೆಸಲಿ” ಎಂದು ಹೇಳಿದರು
.ಸಿದ್ದರಾಮಯ್ಯರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿ ಅವರಿಗಿದೆ: ಇನ್ನು ಈ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, “2028ರ ಚುನಾವಣೆಯಲ್ಲಿ ನಮ್ಮ ತಂದೆಯವರು ಸ್ಪರ್ಧಿಸಲ್ಲ. ಜಾತ್ಯತೀತ ಕಾಂಗ್ರೆಸ್ ಸಿದ್ದಾಂತ ಇಟ್ಟುಕೊಂಡ ಎಷ್ಟೋ ಜನ ರಾಜಕಾರಣಿಗಳಿದ್ದಾರೆ. ಅವರೆಲ್ಲರನ್ನೂ ಸತೀಶ್ ಜಾರಕಿಹೊಳಿ ಮುನ್ನಡೆಸಲಿ. ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿಗೆ ಖಂಡಿತವಾಗಿಯೂ ಇದೆ” ಎಂದು ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದರು.
ತಂದೆಯವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ಸಿದ್ದಾಂತದಲ್ಲಿ ಸತೀಶ್ ಜಾರಕಿಹೊಳಿಯವರು ಕೂಡಾ ನಂಬಿಕೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಹಾಗಾಗಿ, 2028ರ ನಂತರ ಆ ರೀತಿ ಲೀಡ್ ಮಾಡೋರು ಬೇಕು. ಸೈದ್ಧಾಂತಿಕ ರಾಜಕಾರಣ ಮಾಡುವುದರಲ್ಲಿ ಸತೀಶ್ ಜಾರಕಿಹೊಳಿ ಕೂಡ ಒಬ್ಬರು” ಎಂದರು, ಇದೇ ಸಂದರ್ಭದಲ್ಲಿ, ಸಿದ್ದರಾಮಯ್ಯನವರು ರಾಜಕೀಯದ ಕೊನೆ ದಿನಗಳಲ್ಲಿದ್ದಾರೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುತ್ತಾ, “ಕೊನೆಯ ದಿನ ಎಂದರೆ ನಾಳೆಯೇ ಎಂದರ್ಥವಲ್ಲ. 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಾಗೆ ಹೇಳಿದ್ದೇನೆ” ಎಂದರು.
ಇದೇ ವೇಳೆ, “ನಾನು ರಾಜಕೀಯ ಉತ್ತರಾಧಿಕಾರಿ ಬಗ್ಗೆ ಮಾತನಾಡಿಲ್ಲ. ಆದರೆ ಆ ರೀತಿ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರು ಲೀಡ್ ಮಾಡಲಿ ಎನ್ನುವ ಉದ್ದೇಶದಿಂದ ಹೇಳಿದ್ದೇನೆ” ಎಂದು ಯತೀಂದ್ರ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗುವರೇ ಎಂಬ ಪ್ರಶ್ನೆಗೆ, “ಆ ರೀತಿ ಸಿಎಂ ಆಗುವ ಅರ್ಹತೆ ಇದ್ದವರು ಅನೇಕ ನಾಯಕರು ಇದ್ದಾರೆ. ಎಲ್ಲ ಶಾಸಕರು ಮತ್ತು ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ ಇಲ್ಲ. ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿ ಅವರಿಗೆ ಖಂಡಿತವಾಗಿಯೂ ಇದೆ” ಎಂದು ಪುನರುಚ್ಚರಿಸಿದರು.
ಇನ್ನು, “ನವೆಂಬರ್ ಕ್ರಾಂತಿ ಬರೀ ಊಹಾಪೋಹ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಈ ರೀತಿಯ ಚರ್ಚೆ ಪಕ್ಷದಲ್ಲಿ ನಡೆದಿಲ್ಲ” ಎಂದರು.
Laxmi News 24×7