ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿಗೆ ಪಾದಯಾತ್ರೆ ಹೊರಟಿದ್ದವರ ಮೇಲೆ ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದಿರುವ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ನಾಲ್ಕು ಜನರಿಗೆ ಗಾಯವಾಗಿದೆ. ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಅನ್ನಪೂರ್ಣ(40), ಪ್ರಕಾಶ್(25) ಹಾಗೂ ಶರಣಪ್ಪ(19) ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಇವರು ತಮ್ಮ ಗ್ರಾಮದಿಂದ ಹುಲಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದರು. ಇನ್ನು ಕೇವಲ 3 ಗಂಟೆ ಕಳೆದಿದ್ದರೆ ಹುಲಿಗೆಮ್ಮ ದೇವಸ್ಥಾನವನ್ನು ತಲುಪುತ್ತಿದ್ದರು. ದುರಾದೃಷ್ಟವಶಾತ್ ಅದಕ್ಕೂ ಪೂರ್ವದಲ್ಲಿಯೇ ಈ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಎಸ್ಪಿ ಡಾ. ರಾಮ್. ಎಲ್. ಅರಸಿದ್ದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ ; ಪಾದಯಾತ್ರಿ ಸಾವು: ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ ಯುವಕನಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ವೀರೇಶ್ ಹಳ್ಳಿಕೇರಿ (28) ಮೃತ ಯುವಕ ಎಂಬುದು ತಿಳಿದುಬಂದಿದೆ. ಕುಕನೂರು ತಾಲೂಕಿನ ಭಾನಾಪೂರ ಗ್ರಾಮದ ಬಳಿ ಮಂಗಳವಾರ ಘಟನೆ ನಡೆದಿದೆ.
ಕುಕನೂರಿನಿಂದ ಹುಲಿಗೆಮ್ಮ ದೇವಿಗೆ 9 ಜನರು ಪಾದಯಾತ್ರೆ ಹೊರಟಿದ್ದರು. ಭಾನಾಪೂರದ ಬಳಿ ಬಂದಾಗ ಪಾದಯಾತ್ರಿಗಳಿಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಒಬ್ಬ ಪಾದಯಾತ್ರಿ ಮೃತಪಟ್ಟಿದ್ದರೆ, ಮತ್ತೊಬ್ಬ ಪಾದಯಾತ್ರಿ ರಮೇಶ್ಗೆ ಗಾಯವಾಗಿದೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರು ರಿವರ್ಸ್ ತೆಗೆಯುವಾಗ ಡಿಕ್ಕಿಯಾಗಿ 11 ತಿಂಗಳ ಮಗು ಸಾವು (ಪ್ರತ್ಯೇಕ ಸುದ್ದಿ): ರಿವರ್ಸ್ ತೆಗೆಯುವಾಗ ಕಾರು ಡಿಕ್ಕಿಯಾಗಿ 11 ತಿಂಗಳ ಮಗು ಅಸುನೀಗಿರುವ ಘಟನೆ ಬೆಂಗಳೂರಿನಲ್ಲಿ ಅಕ್ಟೋಬರ್ 6 ನಡೆದಿತ್ತು. ಬೆಳಗ್ಗೆ 9:45ರ ಸುಮಾರಿಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪೇಗೌಡ ನಗರದಲ್ಲಿ ಘಟನೆ ನಡೆದಿದ್ದು, ಗಂಡು ಮಗು ಆಜಾನ್ ಮೃತಪಟ್ಟಿದೆ. ಕಾರು ಚಾಲಕ ಸ್ವಾಮಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಕೆಂಪೇಗೌಡ ನಗರದಲ್ಲಿದ್ದ ನಾಲ್ಕೈದು ಮನೆಗಳನ್ನು ಸ್ವಾಮಿ ಬಾಡಿಗೆಗೆ ನೀಡಿದ್ದರು. ಈ ಪೈಕಿ ಒಂದು ಮನೆಯಲ್ಲಿ ವಾಸವಿದ್ದ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಆಜಾನ್ ಪೋಷಕರು ಕುಣಿಗಲ್‌ನಿಂದ ಒಂದು ವಾರದ ಹಿಂದಷ್ಟೇ ಬಂದಿದ್ದರು. ನಿನ್ನೆ ಬೆಳಗ್ಗೆ ಮನೆಯ ಮುಂಭಾಗದಲ್ಲಿ ಮಗು ಆಟವಾಡುತ್ತಿತ್ತು. ಮಗುವನ್ನು ಗಮನಿಸದ ಮನೆ ಮಾಲೀಕ ಸ್ವಾಮಿ ತಮ್ಮ ಕಾರನ್ನು ರಿವರ್ಸ್ ತೆಗೆದಿದ್ದರು. ಅದೇ ಸಂದರ್ಭದಲ್ಲಿ ಮಗುವಿಗೆ ಡಿಕ್ಕಿಯಾಗಿತ್ತು. ಕಿರುಚಾಟ ಕೇಳಿ ಧಾವಿಸಿದ್ದ ಅಕ್ಕಪಕ್ಕದವರು ಗಾಯಗೊಂಡಿದ್ದ ಮಗುವನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಿ ಮಗು ಸಾವನ್ನಪ್ಪಿತ್ತು.
Laxmi News 24×7