ಬೆಂಗಳೂರು: ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್ ವೂ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಐಫೋನ್ ಮತ್ತು ಅದರ ಬಿಡಿಭಾಗಗಳ ತಯಾರಿಕೆಗೆ ಹೆಸರಾಗಿರುವ ಫಾಕ್ಸ್‌ಕಾನ್‌ನ ರಾಬರ್ಟ್ ವೂ ಅವರು ಸಿಎಂ ಜೊತೆಗಿನ ಭೇಟಿಯ ವೇಳೆ, ರಾಜ್ಯದಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆ ಸೇರಿದಂತೆ ಮತ್ತಿತರ ಸಂಗತಿಗಳ ಬಗ್ಗೆ ಚರ್ಚಿಸಿದರು.
ವೂ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಫಾಕ್ಸ್‌ಕಾನ್ ಕಂಪನಿಯು ದೇವನಹಳ್ಳಿಯ ತನ್ನ ಘಟಕದಲ್ಲಿ ಕೈಗಾರಿಕಾ ಚಟುವಟಿಕೆ ಆರಂಭಿಸಿರುವುದು ಒಳ್ಳೆಯದು. ಘಟಕದ ವಿಸ್ತರಣೆಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, “ದೇವನಹಳ್ಳಿಯಲ್ಲಿರುವುದು ಫಾಕ್ಸ್‌ಕಾನ್ ಕಂಪನಿಯ ಎರಡನೇ ಅತಿದೊಡ್ಡ ಘಟಕ. ಆ್ಯಪಲ್ ಕಂಪನಿಗೆ ಇದು ಜಾಗತಿಕ ಮಟ್ಟದಲ್ಲಿ ಮುಂಚೂಣಿ ಪೂರೈಕೆದಾರ ಸಂಸ್ಥೆಯಾಗಿದೆ. ದೇವನಹಳ್ಳಿಯಲ್ಲಿ ತಯಾರಾಗುವ ಐಫೋನ್‌ಗಳನ್ನು ಜಾಗತಿಕ ಸ್ತರದಲ್ಲಿ ರಫ್ತು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಕಂಪನಿ ಇಲ್ಲಿ 22 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ” ಎಂದು ಮಾಹಿತಿ ನೀಡಿದರು.
ಈ ಭೇಟಿಯ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಇದ್ದರು.
Laxmi News 24×7