Breaking News
Home / ರಾಜ್ಯ / ಬ್ರಿಟನ್‍ನಿಂದ ರಾಜ್ಯಕ್ಕೆ 1638 ಜನರು ಹಿಂತಿರುಗಿದ್ದಾರೆ. ಇದರಲ್ಲಿ 14 ಜನರಿಗೆ ಕೊರೊನಾ ಪಾಸಿಟಿವ್

ಬ್ರಿಟನ್‍ನಿಂದ ರಾಜ್ಯಕ್ಕೆ 1638 ಜನರು ಹಿಂತಿರುಗಿದ್ದಾರೆ. ಇದರಲ್ಲಿ 14 ಜನರಿಗೆ ಕೊರೊನಾ ಪಾಸಿಟಿವ್

Spread the love

ಬೆಂಗಳೂರು,ಡಿ.26- ಬ್ರಿಟನ್ ದೇಶವನ್ನೇ ತಲ್ಲಣ್ಣಗೊಳಿಸಿರುವ ರೂಪಾಂತರಗೊಂಡ ಹೊಸ ಮಾದರಿಯ ಕೊರೊನಾ ಸೋಂಕು ಕರ್ನಾಟಕಕ್ಕೂ ಕಾಲಿಟ್ಟಿದೆಯೇ ಇಲ್ಲವೇ ಎಂಬುದು ನಾಳೆ ಬಹಿರಂಗಗೊಳ್ಳಲಿದೆ.  ಬ್ರಿಟನ್‍ನಿಂದ ಸ್ವದೇಶಕ್ಕೆ ಆಗಮಿಸಿರುವ 1638 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ನಾಳೆ ವರದಿ ಬಹಿರಂಗಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್‍ನಿಂದ ರಾಜ್ಯಕ್ಕೆ 1638 ಜನರು ಹಿಂತಿರುಗಿದ್ದಾರೆ. ಇದರಲ್ಲಿ 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಉಳಿದವರನ್ನು ಸಹ ಪರೀಕ್ಷೆಗೊಳಪಡಿಸಲಾಗಿದೆ. ನಾಳೆ ವರದಿ ಕೈ ಸೇರಲಿದೆ. ಮುಂದಿನ ಬೆಳವಣಿಗೆಗಳ ಕುರಿತಂತೆ ಮತ್ತೆ ಸಭೆ ಸೇರಿ ಏನು ಕ್ರಮ ಕೈಗೊಳ್ಳಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

4 ಜನರಿಗೆ ಪಾಸಿಟಿವ್ ಬಂದಿರುವುದರಿಂದ ಹೆಚ್ಚಿನ ಮಾಹಿತಿಗಾಗಿ ನಿಮ್ಹಾನ್ಸ್‍ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಇದು ಬ್ರಿಟನ್‍ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಮಾದರಿಯ ವೈರಸ್ ಎಂದು ಖಚಿತವಾಗಿಲ್ಲ. 17 ರೀತಿಯ ಮೂಟೇಷನ್ ಆಗಿರುವ ವೈರಾಣು ಇದಾಗಿರುವುದರಿಂದ ವರದಿಗೆ 48 ಗಂಟೆ ಬೇಕಾಗುತ್ತೆ ಎಂದು ತಿಳಿಸಿದರು.
ನಿಮ್ಹಾನ್ಸ್‍ನವರು ನೇರವಾಗಿ ಐಸಿಎಂಆರ್‍ಗೆ ಪರೀಕ್ಷೆಯ ಫಲಿತಾಂಶ ಕಳಿಸುತ್ತಾರೆ.

ಐಸಿಎಂಆರ್‍ಗೆ ಕಳುಹಿಸಿಕೊಡಿ ಎಂದು ಪ್ರಧಾನಿಗಳ ಕಚೇರಿ ಸೂಚನೆ ನೀಡಿರುವುದರಿಂದ ಇದರ ಬಗ್ಗೆ ಅವರೇ ಮಾಹಿತಿ ನೀಡುತ್ತಾರೆ. ನಾವು ಯಾವುದೇ ಕಾರಣಕ್ಕೂ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡುತ್ತದೆ ಎಂದರು. ಅಂತಾರಾಷ್ಟ್ರೀಯ ಪ್ರಯಾಣಿಕರ ಬಳಿ ನೆಗೆಟಿವ್ ಪ್ರಮಾಣ ಪತ್ರ ಇಲ್ಲದಿದ್ದರೆ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕು. 72 ಗಂಟೆ ಮುಂಚೆ ತೆಗೆದುಕೊಂಡಿರುವ ವೈದ್ಯಕೀಯ ವರದಿ ಅವರ ಬಳಿ ಇರಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರುತ್ತಿರುವ ಎಲ್ಲರನ್ನೂ ಪರೀಕ್ಷೆ ಮಾಡಲಾಗುತ್ತಿದೆ.

ಹೈದ್ರಾಬಾದ್ ಮೂಲದ ಕೋವ್ಯಾಕ್ಸಿನ್ ಮೂರನೇ ಹಂತದ ಟ್ರಯಲ್ ನಾವೇ ಉದ್ಘಾಟನೆ ಮಾಡಿದ್ದೇವೆ. ಕೆಲವರು ತೆಗೆದುಕೊಂಡಿದ್ದಾರೆ. ಇನ್ನೂ ಕೂಡ ಕೆಲವರು ತೆಗೆದುಕೊಳ್ಳುವವರಿದ್ದಾರೆ. ಇದು ಟ್ರಯಲ್ ಅಷ್ಟೇ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಮುಂಚೂಣಿಯಲ್ಲಿ ಕೆಲಸ ಮಾಡುವವರಿಗೆ ತೆಗೆದುಕೊಳ್ಳಲು ಸಲಹೆ ಕೊಟ್ಟಿದ್ದೆ. ಇದು ಅಧಿಕೃತ ಅಲ್ಲ. ಟ್ರಯಲ್ ವ್ಯಾಕ್ಸಿನ್ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.

ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ಪಾಲನೆ ಮಾಡಬೇಕು. ಕೆಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಆರೋಗ್ಯ ಮತ್ತು ಗೃಹ ಇಲಾಖೆ ಸಮನ್ವಯತೆಯಿಂದ ಮಾರ್ಗಸೂಚಿ ಸಿದ್ದಪಡಿಸುತ್ತಿವೆ. ಕೊರೊನಾ ಮತ್ತು ಹೊಸ ವೈರಾಣು ವಿರುದ್ಧ ಹೋರಾಟದ ಮುಂದುವರೆದ ಭಾಗವಾಗಿ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದರು.
ಶಾಲಾ ಕಾಲೇಜಗಳನ್ನು ಪುನಾರಾರಂಭಿಸುವ ಬಗ್ಗೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರೇ ನಿರ್ಧಾರ ಮಾಡುತ್ತಾರೆ. ಒಂದೆರಡು ದಿನಗಳಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದರು.


Spread the love

About Laxminews 24x7

Check Also

ವೈದ್ಯರ ಸಹಾಯ ಪಡೆಯಲು ನಿರಾಕರಣೆ: ಕೇಜ್ರಿವಾಲ್‌ ಸಾವಿಗೆ ಪಿತೂರಿ; ಎಎಪಿ ಆರೋಪ

Spread the love ನವದೆಹಲಿ: ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಇನ್ಸುಲಿನ್‌ ಪಡೆಯಲು ಮತ್ತು ವೈದ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ