ಬೆಂಗಳೂರು: ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಆಹಾರ ತಡವಾಗಿ ಬಂದಿದ್ದಕ್ಕೆ ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ಧಾರೆ. ಮುಬಾರಕ್ ಹಾಗೂ ಶಾರೂಕ್ ಬಂಧಿತರು. ಹಲ್ಲೆಗೊಳಗಾದ ಚಾಂದ್ ಎಂಬಾತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಆಗಿದ್ದೇನು?: ಸೆ.12ರಂದು ರಾತ್ರಿ ಬಾಪುಜಿ ನಗರದ ಬಳಿ ಆರೋಪಿಗಳು ಜ್ಯೊಮೊಟೊನಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದರು. ಮಳೆ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಚಾಂದ್ ತಡವಾಗಿ ಹೋಗಿದ್ದ. ಇದರಿಂದ ಕೆರಳಿದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ನೀರಿನ ಕ್ಯಾನ್ನಿಂದ ಹೊಡೆದಿದ್ದರು. ಘಟನೆಯ ವಿಡಿಯೋವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಯುವತಿಗೆ ಇರಿದ ಸಾಫ್ಟ್‌ವೇರ್ ಉದ್ಯೋಗಿ ಬಂಧನ: ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿ ಯುವತಿಗೆ ಚಾಕು ಇರಿದಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ 24 ವರ್ಷದ ಯುವತಿಗೆ ಚಾಕುವಿನಿಂದ ಇರಿದು ಹಣ ಸುಲಿಗೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮೂಲದ ಬಾಬು ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 16ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯ ಕೋ-ಲಿವಿಂಗ್ ಪಿ.ಜಿಯೊಂದರಲ್ಲಿ ಯುವತಿಗೆ ಚಾಕು ಇರಿಯಲಾಗಿತ್ತು.
ಬ್ಯಾಂಕ್ ಉದ್ಯೋಗಿಯಾಗಿರುವ ಯುವತಿಗೆ 3 ತಿಂಗಳ ಹಿಂದಷ್ಟೆ ಕೋ-ಲಿವಿಂಗ್ ಪಿ.ಜಿಯಲ್ಲೇ ಬಾಬುನ ಪರಿಚಯವಾಗಿತ್ತು. ಸೆಪ್ಟೆಂಬರ್ 16ರಂದು ನಸುಕಿನ ಜಾವ ಯುವತಿಯ ರೂಮ್‌ಗೆ ಹೋಗಿದ್ದ ಆರೋಪಿ, ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದ. ಸಮ್ಮತಿಸದಿದ್ದಾಗ ಚಾಕುವಿನಿಂದ ಆಕೆಯ ಬೆನ್ನಿಗೆ ಇರಿದು ಗಾಯಗೊಳಿಸಿದ್ದ. ಬಳಿಕ ಯುವತಿಯ ಖಾಸಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಆರೋಪಿ, 70 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದ. ಅಷ್ಟು ಹಣ ಇಲ್ಲ ಎಂದಾಗ ಆಕೆಯ ಮೊಬೈಲ್ ಫೋನ್ ಪಡೆದುಕೊಂಡು 14 ಸಾವಿರ ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದ. ಬಳಿಕ ತನ್ನ ಸ್ನೇಹಿತೆಗೆ ಕರೆ ಮಾಡಿದ್ದ ಯುವತಿ, ಆಕೆಯ ನೆರವಿನೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯಿಂದ ಬಂದ ವರದಿ ಆಧರಿಸಿ ವೈಟ್‌ಫೀಲ್ಡ್ ಠಾಣೆ ಪೊಲೀಸರು ಯುವತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
Laxmi News 24×7