ಕಾರವಾರ: ರಾಜ್ಯದ ಎರಡನೇ ಅತಿ ದೊಡ್ಡ ಜಲಾಶಯವಾಗಿರುವ ಜೋಯಿಡಾ ತಾಲೂಕಿನ ಸೂಪಾ ಜಲಾಶಯ ಭರ್ತಿಯ ಹಂತಕ್ಕೆ ತಲುಪಿದೆ. 564 ಮೀಟರ್ ಎತ್ತರದ ಜಲಾಶಯ ನಿರ್ಮಾಣದ ಬಳಿಕ ಈವರೆಗೆ ನಾಲ್ಕು ಬಾರಿ ಮಾತ್ರ ಭರ್ತಿಯಾಗಿದ್ದು, ಈ ಸಲ ಉತ್ತಮ ಮಳೆಯಾದ ಕಾರಣ ಭರ್ತಿಗೆ ಇನ್ನೂ ಕೇವಲ 5 ಮೀಟರ್ ಬೇಕಾಗಿದೆ.
ರಾಜ್ಯದಲ್ಲೇ ಅತಿ ಎತ್ತರದ ನೀರು ಸಂಗ್ರಹಣೆ ಸಾಮರ್ಥ್ಯದ ಜಲಾಶಯವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ-ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ. ಈ ಸಂಬಂಧ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಗುರುವಾರ ಬಾಗಿನ ಕೂಡ ಅರ್ಪಿಸಿದರು.
ಈ ಜಲಾಶಯದಲ್ಲಿ 147.55 ಟಿಎಂಸಿ ಸಂಗ್ರಹಣೆ ಸಾಮರ್ಥ್ಯವಿದೆ. ಸದ್ಯ 128 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ನಿರಂತರವಾಗಿ ಮಳೆ ಸುರಿದಿದ್ದರೂ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ನೀರು ಸಂಗ್ರಹಣೆ ಕಡಿಮೆ ಇದೆ. ಕಳೆದ ಬಾರಿ ಸೆ.4ರ ಹೊತ್ತಿಗೆ 560.72 ಮೀಟರ್ ಮಟ್ಟಕ್ಕೆ ನೀರು ಸಂಗ್ರಹವಾಗಿತ್ತು. ಆದರೆ ಈ ವರ್ಷ ಇದೇ ದಿನಕ್ಕೆ 560 ಮೀ. ಸಂಗ್ರಹವಾಗಿದೆ. ಸದ್ಯ ಜಲಾಶಯಕ್ಕೆ 12484.13 ಕ್ಯೂಸೆಕ್ ನೀರಿನ ಒಳಹರಿವು ಇದ್ದು 4110.72 ಕ್ಯೂಸೆಕ್ ಹೊರ ಹರಿವು ಇದೆ.
ಇನ್ನು ಜಲಾಶಯವು ಸಮುದ್ರ ಮಟ್ಟದಿಂದ 564 ಅಡಿ ಎತ್ತರವಿದ್ದು ರಾಜ್ಯದ ಎರಡನೇ ಅತಿ ದೊಡ್ಡ ಜಲಾಶಯವಾಗಿದೆ. ಆದರೆ ಜಲಾಶಯ ನಿರ್ಮಾಣಗೊಂಡು 40 ವರ್ಷಗಳು ಕಳೆದರೂ ಇವರೆಗೆ ಭರ್ತಿಯಾಗಿರುವುದು ನಾಲ್ಕು ಬಾರಿ ಮಾತ್ರ. ಮೊದಲ ಬಾರಿ 1994ರಲ್ಲಿ ಭರ್ತಿಯಾಗಿತ್ತು. ಬಳಿಕ 2006, 2018 ಮತ್ತು 2019ರಲ್ಲಿ ಮಾತ್ರ ಜಲಾಶಯ ಶೇ 95ರಷ್ಟು ಭರ್ತಿಯಾಗಿತ್ತು.
ಜಲಾಶಯವು ಶೇ. 95 ರಷ್ಟು ಭರ್ತಿಯಾಗಿ ಮಳೆ ನಿರಂತರವಾಗಿದ್ದು ಒಳ ಹರಿವಿನ ಪ್ರಮಾಣ ಹೆಚ್ಚಿದ್ದರೇ ಮಾತ್ರ ಜಲಾಶಯದಿಂದ ಮೂರು ಗೇಟ್ ಮೂಲಕ ನೀರು ಹೊರ ಬಿಡಲಾಗುವುದು. ಇಲ್ಲದೆ ಇದ್ದಲ್ಲಿ ನಿತ್ಯವೂ ವಿದ್ಯುತ್ ಉತ್ಪಾದನೆ ಮೂಲಕ ಮಾತ್ರ ನೀರು ಹೊರಗೆ ಹರಿಸಲಾಗುವುದು ಎಂದು ಜಲಾಶಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಶೋಕಕುಮಾರ್ ತಿಳಿಸಿದರು.
Laxmi News 24×7