ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ 8362.68 ಕೋಟಿ ರೂ ಸಾಲ ವಿತರಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಪದಚ್ಯುತಿಗೊಳಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ, ರೈತರಿಗೆ ಸಕಾಲದಲ್ಲಿ ಕೃಷಿ ಸಾಲವನ್ನು ಸಿಗುವುದನ್ನು ಖಾತ್ರಿಪಡಿಸಬೇಕು. ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹಿಂದಿನ ಸಾಲಿನಲ್ಲಿದ್ದ 5,600 ಕೋಟಿಗಳಿಂದ 3,236.11 ಕೋಟಿ ರೂಗೆ ಅಂದರೆ ಶೇ.42.21ರಷ್ಟು ಕಡಿಮೆ ಮಾಡಿದೆ. ಆದರೂ ಸಾಲ ವಿತರಣೆಯಲ್ಲಿ ಶೇ.96.07 ರಷ್ಟು ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನಲ್ಲಿ 29,75,598 ರೈತರಿಗೆ 25,939.09 ಕೋಟಿ ರೂ ಕೃಷಿ ಸಾಲ ವಿತರಣೆ ಮಾಡಲಾಗಿದೆ. ರಾಜ್ಯದಲ್ಲಿ 28,516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಸಾಲ ವಸೂಲಾತಿ ಸರಿಯಾಗಿ ಆಗದ ಕಾರಣ ಬಹುತೇಕ ಸಂಘಗಳು ನಷ್ಟದಲ್ಲಿದ್ದು, ಅಂತಹ ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಇದರಲ್ಲಿ 2200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ. ಹಾಲು ಉತ್ಪಾದಕ ಸಹಕಾರ ಸಂಘಗಳ ವೆಚ್ಚದ ಮೇಲೆ ನಿಗಾ ಇರಿಸಬೇಕು. ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಸಂಘಗಳ ಕಾರ್ಯದರ್ಶಿಗಳ ಜವಾಬ್ದಾರಿ. ಹಾಲು ಉತ್ಪಾದಕ ಸಹಕಾರ ಸಂಘಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ನ ಅವ್ಯವಹಾರಗಳ ಕುರಿತು ಡಿಆರ್ಸಿಎಸ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಕೆಲವು ಸದಸ್ಯರ ಸದಸ್ಯತ್ವವನ್ನು ಪರಿಷತ್ ರದ್ದುಪಡಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚನೆ ನೀಡಿದರು.
Laxmi News 24×7