ಬೆಂಗಳೂರು: ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾದ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿದ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್ಗೆ ಬಂದ ದರ್ಶನ್ ಅವರನ್ನ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರ ತಂಡ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪವಿತ್ರಾಗೌಡ, ದರ್ಶನ್ ತೂಗುದೀಪ, ಪ್ರದೋಶ್, ಲಕ್ಷ್ಮಣ್ ಹಾಗೂ ನಾಗರಾಜ್ನನ್ನ ಬಂಧಿಸಲಾಗಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರು ಖಚಿತಪಡಿಸಿದ್ದಾರೆ. ಇನ್ನು ಆರೋಪಿಗಳಾದ ಜಗದೀಶ್, ಅನುಕುಮಾರ್ ನನ್ನು ಚಿತ್ರದುರ್ಗದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಬಂಧಿತರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದೊಯ್ಯಲಿರುವ ಪೊಲೀಸರು ಬಳಿಕ ವೈದ್ಯಕೀಯ ತಪಾಸಣೆಗೊಳಪಡಿಸಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ನಂತರ ನ್ಯಾಯಾಲಯದ ಆದೇಶ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಲಿದ್ದಾರೆ.
ಕೋರ್ಟ್ ಆದೇಶದಂತೆ ಕ್ರಮ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಜಾಮೀನು ರದ್ದಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಕೋರ್ಟ್ ಆದೇಶದ ಸಂಪೂರ್ಣ ಮಾಹಿತಿ ಪಡೆದು ಸಂಬಂಧಪಟ್ಟ ವಿಭಾಗದ ಡಿಸಿಪಿ, ಪ್ರಕರಣದ ತನಿಖಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇರೆಗೆ 2024ರ ಜೂನ್ 11ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ ಹಲವರು ಬಂಧನಕ್ಕೊಳಗಾಗಿ, ಹಲವು ತಿಂಗಳು ಜೈಲಿನಲ್ಲಿದ್ದರು. ಬಳಿಕ ನಟ ದರ್ಶನ್ ತೂಗುದೀಪ ಸೇರಿದಂತೆ 7 ಆರೋಪಿಗಳಿಗೆ ಡಿಸೆಂಬರ್ 13, 2024ರಂದು ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ, ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಮೂರ್ತಿಗಳಾದ ನ್ಯಾ. ಜೆ.ಬಿ. ಪರ್ದಿವಾಲಾ, ನ್ಯಾ. ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠವು ಹೈಕೋರ್ಟ್ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಆ 14ಕ್ಕೆ ತೀರ್ಪು ಕಾಯ್ದಿರಿಸಿತ್ತು.
ಇಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಜನಪ್ರಿಯತೆ, ಅಧಿಕಾರ ಅಥವಾ ಸವಲತ್ತು ಏನೇ ಇರಲಿ, ಕಾನೂನಿನೆದುರು ಎಲ್ಲರೂ ಸಮಾರು ಎಂದು ತಿಳಿಸಿ, ಜಾಮೀನು ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ದರ್ಶನ್, ಪವಿತ್ರಾಗೌಡ, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಹಾಗೂ ಪ್ರದೋಶ್ ಮತ್ತೆ ಜೈಲು ಸೇರಬೇಕಿದೆ.
Laxmi News 24×7