ಬೆಂಗಳೂರು: ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ಧಪಡಿಸಿರುವ ರಾಜ್ಯ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಪ್ರಸ್ತಾಪಿತ ಮಸೂದೆಯಲ್ಲೇನಿದೆ ಎಂಬ ವಿಶೇಷ ವರದಿ ಇಲ್ಲಿದೆ.
ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ರಾಜ್ಯಾದ್ಯಂತ ಯುವ ಜನಾಂಗದ ಬದುಕನ್ನೇ ಕಸಿಯುತ್ತಿದೆ. ಅದೆಷ್ಟು ಮಂದಿ ಈ ಆನ್ಲೈನ್ ಬೆಟ್ಟಿಂಗ್ ಆಟಕ್ಕೆ ಸಿಲುಕಿ ಕೋಟ್ಯಾಂತರ ರೂ. ಸಾಲ ಮಾಡಿ ಕೊನೆಗೆ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಆನ್ಲೈನ್ ಬೆಟ್ಟಿಂಗ್ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ.
ಯುವ ಜನಾಂಗವನ್ನು ಸಾಲದ ಶೂಲಕ್ಕೆ ಸಿಲುಕಿಸಿ ಜೀವನವನ್ನೇ ಕಸಿಯುತ್ತಿರುವ ಈ ಪಿಡುಗಿಗೆ ಅಂಕುಶ ಹಾಕುವಂತೆ ಸಾರ್ವಜನಿಕ ವಲಯದಿಂದ ಸಾಕಷ್ಟು ಒತ್ತಾಯ ಕೇಳಿ ಬರುತ್ತಲೇ ಇದೆ. ಇತ್ತ ಪಕ್ಷಾತೀತವಾಗಿ ಅಧಿವೇಶನಗಳಲ್ಲಿ ಶಾಸಕರು ಇದಕ್ಕೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಆನ್ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ಗೆ ಕಡಿವಾಣ ಹಾಕಲು ಕಠಿಣ ಕಾನೂನು ರೂಪಿಸಿದೆ.
ಆನ್ಲೈನ್ ಬೆಟ್ಟಿಂಗ್ಗೆ ನಿಷೇಧ: ರಾಜ್ಯ ಸರ್ಕಾರ ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ಹಾವಳಿಗೆ ಕಡಿವಾಣ ಹಾಕಲು ಇದೀಗ ಕರ್ನಾಟಕ ಪೊಲೀಸ್ (ತಿದ್ದುಪಡಿ) ಬಿಲ್ 2025 ಕರಡು ರೂಪಿಸಿದೆ. ಈ ಕರಡು ಪ್ರತಿ ಈ ಟಿವಿ ಭಾರತ್ಗೆ ಲಭ್ಯವಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಮುಂದಾಗಿದೆ. ಈ ಮೂಲಕ ಬಹುಬೇಡಿಕೆಯ ಆನ್ಲೈನ್ ಬೆಟ್ಟಿಂಗ್ಗೆ ಕಡಿವಾಣ ಹಾಕುವ ಕಾನೂನು ಜಾರಿಗೆ ತರಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಪ್ರಸ್ತಾವಿತ ಕಾನೂನು ಪ್ರಕಾರ ಗೇಮ್ ಆಫ್ ಚಾನ್ಸ್ ಅಂದರೆ ಯಾವುದೇ ಆಟ, ಸ್ಪರ್ಧೆ ಅಥವಾ ಕ್ರಿಯೆಯ ಫಲಿತಾಂಶಗಳು ಬಹುವಾಗಿ ಅದೃಷ್ಟದಿಂದ ಅವಲಂಬಿತವಾಗಿರುವ, ಅನಿಶ್ಚಿತತೆಗಳಿಂದ ಕೂಡಿರುವ ಆನ್ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಅಥವಾ ಪಂತ ಕಟ್ಟುವ ಚಟುವಟಿಕೆಗಳು ನಿಷಿದ್ಧವಾಗಿವೆ.
ಬಹುವಾಗಿ ಅದೃಷ್ಟದ ಮೂಲಕ ಫಲಿತಾಂಶ ಹೊರಹೊಮ್ಮುವ ಆನ್ಲೈನ್ ಬೆಟ್ಟಿಂಗ್ ಅಂದರೆ ಯಾವುದೇ ರೀತಿಯಲ್ಲಿ ಪಂತ ಕಟ್ಟುವುದು, ಹಣ ಇಡುವುದು, ಟೋಕನ್, ವರ್ಚುವಲ್ ಕರೆನ್ಸಿ ಅಥವಾ ಇ-ಫಂಡುಗಳನ್ನು ಇಟ್ಟು ಅಂತರ್ಜಾಲ, ಮೊಬೈಲ್ ಆಪ್ ಅಥವಾ ಇತರೆ ಡಿಜಿಟಲ್ ವೇದಿಕೆಗಳ ಮೂಲಕ ಆಡುವ ಆಟವನ್ನು ನಿಷೇಧಿಸಲಾಗುತ್ತದೆ. ಜೊತೆಗೆ ನೋಂದಾಯಿತವಲ್ಲದ ವೇದಿಕೆಗಳ ಮೂಲಕ ಇಂಥ ಆನ್ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ಸೇವೆ ಕೊಡುವುದನ್ನು ಈ ಹೊಸ ಮಸೂದೆ ನಿಷೇಧಿಸುತ್ತದೆ.
Laxmi News 24×7