ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿಯ ದೇಗುಲದಲ್ಲಿ ಇರಿಸಲಾಗಿದ್ದ ಕಾಣಿಕೆ ಪೆಟ್ಟಿಗೆಗಳನ್ನು ಬುಧವಾರ ಎಣಿಕೆ ಮಾಡಲಾಗಿದ್ದು, ಥಾಯ್ಲೆಂಡಿನ 20 ಬಾತ್ ಮತ್ತು ಅಮೆರಿಕದ ಒಂದು ಡಾಲರ್ ಕರೆನ್ಸಿ ಪತ್ತೆಯಾಗಿವೆ. ಅಂಜನಾದ್ರಿಯ ಹನುಮಪ್ಪನ ಸನ್ನಿಧಾನದಲ್ಲಿ ಇರಿಸುವ ಕಾಣಿಕೆ ಹುಂಡಿ ಎಣಿಕೆ ಮಾಡಿದ ಪ್ರತಿ ಬಾರಿ ವಿದೇಶಿ ನೋಟು, ನಾಣ್ಯಗಳು ಪತ್ತೆಯಾಗುವುದು ಸಹಜವಾಗಿ ಆಂಜನೇಯನ ಭಕ್ತರು ಸಪ್ತ ಸಾಗರದಾಚೆಗೂ ಹರಡಿರುವುದು ಖಚಿತವಾಗುತ್ತಿದೆ.
63.10 ಲಕ್ಷ ರೂಪಾಯಿ ನಗದು ಸಂಗ್ರಹ: ಈ ಬಾರಿ ಕಾಣಿಕೆ ಹುಂಡಿಯಲ್ಲಿ ಅತ್ಯಧಿಕ ಪ್ರಮಾಣದ ಅಂದರೆ 63.10 ಲಕ್ಷ ರೂಪಾಯಿ ನಗದು ಸಂಗ್ರಹವಾಗಿದೆ. ದೇವಸ್ಥಾನದಲ್ಲಿ ಸಂಗ್ರಹವಾದ ಆದಾಯದಲ್ಲಿ ಇದು ದಾಖಲೆಯಾಗಿದೆ. ಈ ಹಿಂದೆ ಅಂದರೆ ಮಾರ್ಚ್ 28ಕ್ಕೆ ಹುಂಡಿ ಎಣಿಕೆ ಮಾಡಿದಾಗ ಕೇವಲ 20 ದಿನದಲ್ಲಿ ಹತ್ತು ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಈಗ 89 ದಿನದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, 63.10 ಲಕ್ಷ ಮೊತ್ತದ ನಗದು ಸಂಗ್ರಹವಾಗಿದೆ. ಭಕ್ತರು, ಕಂದಾಯ ಇಲಾಖೆ ಹಾಗೂ ದೇಗುಲದ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಜನ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಎಣಿಕೆಯಲ್ಲಿ ಭಾಗಿಯಾಗಿದ್ದರು.
Laxmi News 24×7