ರಾಮನಗರ: ಹಣ ಪಡೆದು ಮನೆ ನೀಡಿದ್ದಾರೆ ಎಂಬ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪ ಸುಳ್ಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ?. ನಾನು ಅಥವಾ ನೀವು ಬಂದು ಗ್ರಾಮ ಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಸೇರಿದಂತೆ ಎಲ್ಲೆಲ್ಲಿ ಮನೆ ನಿಡಬೇಕೋ ಆಯಾ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡುತ್ತವೆ. ನಾವು ತೀರ್ಮಾನ ಮಾಡಲು ಆಗುತ್ತದೆಯೇ?. ಬಿ.ಆರ್.ಪಾಟೀಲ್ ಅವರಿಗೆ ಪೂರ್ಣ ಮಾಹಿತಿ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ನಾನು ಅವರ ಬಳಿ ಮಾತನಾಡುತ್ತೇನೆ ಎಂದರು.ಇದಕ್ಕೂ ಮೊದಲು ಕನಕಪುರದ ಹಾರೋಹಳ್ಳಿಯ ಮರಳವಾಡಿಯಲ್ಲಿ ಸ್ಥಾಪನೆಯಾಗಿರುವ ನೂತನ ಕರಿಯಪ್ಪ ಕೃಷಿ ಮಹಾವಿದ್ಯಾಲಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕನಕಪುರ ರೂರಲ್ ಎಜುಕೇಷನ್ ಸೊಸೈಟಿ ಉಳಿಸಿ, ಬೆಳೆಸುವುದು ನನ್ನ ಕೆಲಸ. ಜನಸಾಮಾನ್ಯರ ಮಕ್ಕಳಿಗಾಗಿ ಈ ಸಂಸ್ಥೆಯಿಂದ ಕೃಷಿ ಕಾಲೇಜು ನಿರ್ಮಾಣವಾಗಿದೆ. ಈ ಸಂಸ್ಥೆ ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಮ್ಮೆ. ನನಗೂ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಂಠು ಅವರಿಗೆ ಸಂಸ್ಥೆಯ ಜಾಗ ಎಲ್ಲಿ ಒತ್ತುವರಿಯಾಗುತ್ತದೆಯೋ ಎನ್ನುವ ಆಂತಕವಿತ್ತು. ಈಗ ಸದರಿ ಜಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾಗುತ್ತಿರುವುದು ಸಮಾಧಾನ ತಂದಿದೆ ಎಂದು ತಿಳಿಸಿದರು.
Laxmi News 24×7